ಕುಂಬಳೆ: ಸಿಪಿಎಂ ಶಕ್ತಿಕೇಂದ್ರವೆಂದೇ ಪರಿಗಣಿಸಲ್ಪಡುವ ಕಣ್ಣೂರು ಜಿಲ್ಲೆಯಿಂದ ಕೇರಳದ ಮೂರನೇ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಆಯೆ ಆಗಿದ್ದಾರೆ. ಈ ಹಿಂದೆಕಣ್ಣೂರಿನವರಾಗಿದ್ದ ಹಿರಿಯ ಕಾಂಗ್ರೆಸ್ ರಾಜಕಾರಣಿ ಕೆ.ಕರುಣಾಕರನ್ ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಸಿಪಿಎಂ ಪಕ್ಷದ ಪ್ರಭಾವಿ ನಾಯಕ ಇ.ಕೆ ನಾಯನಾರ್ ಕೂಡಾ ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಕಣ್ಣೂರು ಜಿಲ್ಲೆಯ ಬಹು ಉತ್ತರದ ಪ್ರದೇಶದವಾದ ಕಲ್ಯಾಣಶ್ಯೇರಿಯಿಂದ ಬಂದವರಾಗಿದ್ದರು. ಪ್ರಸ್ತುತ ಮುಖ್ಯಮಂತ್ರಿಯಾಗಿ 14ನೇ ವಿಧಾನಸಭೆಯಲ್ಲಿ ಅಧಿಕಾರ ವಹಿಸಲಿರುವ ಪಿಣರಾಯಿ ವಿಜಯನ್ ಸಹ ಕಾಸರಗೋಡು ಸಮೀಪದ ಜಿಲ್ಲೆ ಕಣ್ಣೂರಿನ ಪಿಣರಾಯಿವರೆಂಬುದು ವಿಶೇಷ.
ಕಾಸರಗೋಡು ಜಿಲ್ಲೆಯ ದಕ್ಷಿಣದಲ್ಲಿರುವ ಮೂರು ವಿಧಾನಸಭಾ ಕ್ಷೇತ್ರಗಳು ಬಹಳ ಹಿಂದಿನಿಂದಲೂ ಸಿಪಿಎಂ ಪಕ್ಷದ ಭದ್ರ ಕೋಟೆಯಾಗಿವೆ, ನಂತರ ಬರುವ ಕಣ್ಣೂರು ಜಿಲ್ಲೆಯಲ್ಲಿ ಸಿಪಿಎಂ ಪ್ರಾಬಲ್ಯ ಬಹಳ ಹೆಚ್ಚಿರುವ ಕಾರಣ ಎಡರಂಗ ನಾಯಕರಿಗೆ ಕಾಸರಗೋಡು ಜಿಲ್ಲೆಯೆಂದರೆ ಅಚ್ಚುಮೆಚ್ಚು.ಉದುಮ ಕ್ಷೇತ್ರದ ಅಭ್ಯರ್ಥಿ ಕೆ.ಕುಞರಾಮನ್ ಪರವಾಗಿ ಪ್ರಚಾರಸಭೆಯಲ್ಲಿ ಎರಡು ವಾರಗಳ ಹಿಂದೆ ಪಿಣರಾಯಿ ವಿಜಯನ್ ಭಾಗವಹಿಸಿದ್ದರು.ಈ ಬಾರಿ ಕೇರಳದಲ್ಲಿ ಎಡರಂಗ ಅಧಿಕಾರಕ್ಕೇರುವುದು ಖಚಿತ ಎಂಬ ಮಾತನ್ನು ಮುಳಿಯಾರು ಗ್ರಾ.ಪಂ ವ್ಯಾಪ್ತಿಯ ಬೋವಿಕ್ಕಾನದಲ್ಲಿ ನಡೆದ ಸಭೆಯಲ್ಲಿ ಅವರು ಹೇಳಿದ್ದರು.ಕಾರ್ಯಕ್ರಮದಲ್ಲಿ ಕಾಸರಗೋಡು ಸಂಸದ ಲೋಕಸಭೆಯ ಎಡರಂಗ ನಾಯಕ ಪಿ.ಕರುಣಾಕರನ್ ಸಭೆಯಲ್ಲಿ ಉಪಸ್ಥಿತರಿದ್ದು ವೇದಿಕೆ ಹಂಚಿಕೊಂಡಿದ್ದರು. ಬಹಳ ಹಿಂದೆ ಕಣ್ಣೂರು ಕಾಸರಗೋಡು ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಿಂದ ರಾಜ್ಯದ ಪ್ರಥಮ ಮುಖ್ಯಮಂತ್ರಿಇ.ಎಂ.ಎಸ್ ನಂಬೂದರಿಪ್ಪಾಡ್ ಸ್ಪರ್ಧಿಸಿ ಬಹುಮತದೊಂದಿಗೆ ಜಯಿಸಿ ಮುಖ್ಯಮಂತ್ರಿ ಸ್ಥಾನ ಪಡೆದ ಚರಿತ್ರೆಯು ಇದೆ.
Click this button or press Ctrl+G to toggle between Kannada and English