ಸಹಕಾರ ಕ್ಷೇತ್ರಕ್ಕೆ ಭದ್ರ ನೆಲೆ ಕಲ್ಪಿಸಿರುವ ಮೊಳಹಳ್ಳಿ ಶಿವರಾಯರು ಈ ಕ್ಷೇತ್ರದ ಪ್ರೇರಕ ಶಕ್ತಿ: ರಾಜೇಂದ್ರ ಕುಮಾರ್‌

12:13 PM, Friday, August 5th, 2016
Share
1 Star2 Stars3 Stars4 Stars5 Stars
(No Ratings Yet)
Loading...

Molahalli-Shivarayaಮಂಗಳೂರು: ಸಹಕಾರ ಕ್ಷೇತ್ರಕ್ಕೆ ಭದ್ರ ನೆಲೆ ಕಲ್ಪಿಸಿರುವ ದಿ| ಮೊಳಹಳ್ಳಿ ಶಿವರಾಯರು ಈ ಕ್ಷೇತ್ರದ ಪ್ರೇರಕ ಶಕ್ತಿ. ಇಂದು ಸಹಕಾರ ಕ್ಷೇತ್ರ ಸಂಸ್ಮರಣೆ ಮಾಡುತ್ತಿರುವುದು ಅವರ ಆದರ್ಶ ವ್ಯಕ್ತಿತ್ವಕ್ಕಾಗಿ.

ಎಲ್ಲರನ್ನು ಒಟ್ಟುಗೂಡಿಸಿ ಸಹಕಾರವೆಂಬ ನಂದಾದೀಪ ಬೆಳಗಿಸಿದ ಶಿವರಾಯರು ತನ್ನ ಜೀವಿತಕಾಲದ 87 ವರ್ಷಗಳಲ್ಲಿ 58 ವರ್ಷಗಳನ್ನು ಸಹಕಾರ ಕ್ಷೇತ್ರಕ್ಕಾಗಿ ಮೀಸಲಿರಿಸಿರುವುದರಿಂದ ಅವರು ಸಹಕಾರ ಕ್ಷೇತ್ರದ ಪಿತಾಮಹರಾಗಿ ಇಂದಿಗೂ ಸಹಕಾರಿಗಳೆಲ್ಲರಿಗೂ ಸ್ಮರಣೀಯರಾಗಿದ್ದಾರೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದ್ದಾರೆ.

ಅವರು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ ಸಂಯುಕ್ತ ಆಶ್ರಯದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್‌ ಅವರ 136ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ| ಕೆ.ಎಂ. ಲೋಕೇಶ್‌ ಸಮಾರಂಭ ಉದ್ಘಾಟಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಸಂಘಗಳ ಆರಂಭ ಸದುದ್ದೇಶಕ್ಕಾಗಿ ನಡೆದು, ಅದರ ವಿಕಾಸ ಹಾಗೂ ಪ್ರಭಾವ ಮೊಳಹಳ್ಳಿ ಶಿವರಾಯರ ವ್ಯಕ್ತಿತ್ವದಿಂದ ಪ್ರಜ್ವಲಿಸಿದೆ. ರೈತಾಪಿ ವರ್ಗದ ಸಕಲ ಬೇಡಿಕೆ ಸಹಕಾರ ಕ್ಷೇತ್ರದ ಮೂಲಕ ಆಗಬೇಕೆಂದು ಹೇಳಿದ ಶಿವರಾಯರು ತ್ಯಾಗ ಜೀವನಕ್ಕೆ ಪ್ರಸಿದ್ಧರು ಎಂದರು.

ಕರ್ನಾಟಕ ರಾಜ್ಯ ಸಹಕಾರ ಅಡಿಕೆ ಮಾರಾಟ ಮಹಾ ಮಂಡಲದ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಮೊಳಹಳ್ಳಿ ಶಿವರಾಯರ ಸಂಸ್ಮರಣೆಗೈದರು. ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ಶಿವರಾಯರು ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸಿದರು.

ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ನಿರ್ದೇಶಕ ಸುದರ್ಶನ್‌ ಜೈನ್‌, ಸ್ಕಾಡ್ಸ್‌ ಅಧ್ಯಕ್ಷ ರವೀಂದ್ರ ಕಂಬಳಿ, ಹಾಪ್‌ಕಾಮ್ಸ್‌ ಅಧ್ಯಕ್ಷ ಲಕ್ಷ್ಮಿ ನಾರಾಯಣ ಉಡುಪ, ಎಸ್‌ಸಿಡಿಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್‌, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್‌ನ ಸಿಇಒ ಪ್ರತಿಭಾ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಹರೀಶ್‌ ಆಚಾರ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಬ್ಯಾಂಕ್‌ನ ಮಾಜಿ ವ್ಯವಸ್ಥಾಪನ ನಿರ್ದೇಶಕ ಲಕ್ಷ್ಮಣ್‌ ಕುಮಾರ್‌ ಮಲ್ಲೂರು ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English