ಮಂಗಳೂರು: ಗುರುಪೂರ್ಣಿಮೆ ಉತ್ಸವ ದಿನದಂದು ರಕ್ಷಾಬಂಧನವನ್ನು ಕಟ್ಟುವುದು ಹಿಂದೂಗಳ ಸಂಪ್ರದಾಯ. ಪುರಾಣಗಳಲ್ಲಿ ಕೂಡಾ ರಾಖಿಯ ಕುರಿತ ಅನೇಕ ಕಥೆಗಳಿವೆ. ವಿಶೇಷವೆಂದರೆ ಬಿಕರ್ನಕಟ್ಟೆ ಬಾಲಯೇಸು ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಮತ್ತು ಚರ್ಚ್‌ನ ಧರ್ಮಗುರುಗಳು, ಭಕ್ತರು ಪರಸ್ಪರ ರಾಖಿಕಟ್ಟುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾದರು.
ರಾಖಿ ಹಬ್ಬದ ಮಹತ್ವ ಕುರಿತು ಉಪನ್ಯಾಸ ನೀಡಿದ ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹ ಸಂಘಚಾಲಕ ಡಾ. ಪಿ.ವಿ. ವಾಮನ್ ಶೆಣೈ, ತನ್ನ ಮಾನ ಪ್ರಾಣ ರಕ್ಷಣೆಗಾಗಿ ರಾಖಿ ಕಟ್ಟುವ ಸಹೋದರಿಯ ರಕ್ಷಣೆಗೆ ಜೀವತೆತ್ತು ಮಾನ-ಪ್ರಾಣ ರಕ್ಷಿಸಿದ ರಜಪೂತ ಸಂಸ್ಕೃತಿಯನ್ನು ನೆನಪಿಸುವ ದಿನವನ್ನು ರಾಷ್ಟ್ರ ರಕ್ಷಣೆಯ ಚಿಂತನೆಗಾಗಿ ಮುಡಿಪಾಗಿಡಬೇಕು. ಐಕ್ಯತೆಗೆ ಸವಾಲಾಗಿರುವ ಜಾತಿ, ಧರ್ಮದ ಬೀಜವನ್ನು ಕಿತ್ತೆಸೆಯಬೇಕೆಂದರು.
ಈ ದೇಶ ನನ್ನದು ಎಂಬ ಶ್ರದ್ಧೆ, ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನದ್ದಾಗಿದೆ. ಸಹೋದರತ್ವ, ಸಾಮರಸ್ಯ ಮೂಲಕ ಸಂಘಟಿತ ಸಮಾಜ ನಿರ್ಮಾಣ ಧ್ಯೇಯಗಳೊಂದಿಗೆ ರಾಷ್ಟ್ರೀಯ ಚಿಂತನೆಯನ್ನಿಟ್ಟುಕೊಂಡಾಗ ದೇಶದ ಬಹುತೇಕ ಸಮಸ್ಯೆ, ಸವಾಲುಗಳನ್ನು ಮೆಟ್ಟಿನಿಲ್ಲಬಹುದು. ಇದಕ್ಕೆ ಇಸ್ರೇಲ್, ಅಮೆರಿಕಾ, ಜಪಾನ್‌ನಂತಹ ರಾಷ್ಟ್ರಗಳಲ್ಲಿನ ರಾಷ್ಟ್ರೀಯ ಚಿಂತನೆಗಳು ಉದಾಹರಣೆಯಾಗಿವೆ. ರಾಷ್ಟ್ರೀಯತೆಯ ಚಿಂತನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಆರ್‌ಎಸ್‌ಎಸ್‌ನ ಪರಿಕಲ್ಪನೆಯನ್ನು ಹಲವರು ಸಮರ್ಪಕವಾಗಿ ಅರ್ಥೈಸದೇ, ವಿಮರ್ಶದಿದ್ದರೂ ಚರ್ಚ್ ಧರ್ಮಾಧಿಕಾರಿಗಳು ಸರಿಯಾಗಿ ಅರ್ಥೈಸಿಕೊಂಡಿದ್ದರಿಂದಲೇ ಇಲ್ಲಿ ಉತ್ಸವಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ಧರ್ಮಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಡಾ. ವಾಮನ್ ಶೆಣೈ ಹಾಗೂ ಬಾಲಯೇಸು ಮಂದಿರದ ನಿರ್ದೇಶಕ ಎಲಿಯಾಸ್ ಡಿಸೋಜಾ ಅವರು ಪರಸ್ಪರ ರಾಖಿ ಕಟ್ಟುವ ಮೂಲಕ ಶುಭಾಶಯ ಕೋರಿದರು. ಸಮಸ್ತ ಕ್ರೈಸ್ತ ಬಂಧುಗಳ ಪರವಾಗಿ ಸೋನಿ ಅವರು ಡಾ. ಶೆಣೈ ಅವರಿಗೆ ರಾಖಿ ಕಟ್ಟಿದರು. ಬಳಿಕ ಕ್ರೈಸ್ತ ಮಹಿಳೆಯರು ಆರೆಸ್ಸೆಸ್ ಪ್ರಮುಖರುಗಳಿಗೆ ರಾಖಿ ಕಟ್ಟಿ ಶುಭಾಶಯ ಕೋರಿಕೊಂಡರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಕಾರ್ಯವಾಹ ಹರಿಕೃಷ್ಣ ಕಿರಿಯ ಧರ್ಮಗುರುಗಳಾದ ಬಾಲಯೇಸು ಮಂದಿರದ ಉಪ ನಿರ್ದೇಶಕ ವಂದನೀಯ ಪ್ರಕಾಶ್ ಡಿಕುನ್ಹಾ, ಫ್ರಾಂಕ್ಲಿನ್ ಮೊಂತೆರೋ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English