ಮಂಜೇಶ್ವರ: ಬೀಗ ಹಾಕಿದ ಮನೆಯೊಂದರ ಹಿಂಬಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನೊಳಗಿರಿಸಿದ್ದ ನಗದನ್ನು ಕಳವು ಗೈದು ಬಳಿಕ ಮನೆಯೊಳಗೆ ಕೆಂಪು ಮೆಣಸನ್ನು ಹಾಕಿ ಪರಾರಿಯಾದ ಘಟನೆ ಉದ್ಯಾವರ ಜುಮಾ ಮಸೀದಿ ಪರಿಸರದಲ್ಲಿ ನಡೆದಿದೆ.
ಉದ್ಯಾವರ ಜುಮಾ ಮಸೀದಿ ಸಮೀಪವಾಸಿ ಗಲ್ಫ್ ಉದ್ಯೋಗಿ ಇಬ್ರಾಹಿಂ ಎಂಬವರ ಮನೆಗೆ ನುಗ್ಗಿದ ಕಳ್ಳರು ಮಕ್ಕಳ ಶಾಲಾ ಕಾಲೇಜಿನ ಶುಲ್ಕ ಪಾವತಿಸಲು ಕಪಾಟಿನಲ್ಲಿ ಇಟ್ಟಿದ್ದ 52 ಸಾವಿರ ರೂ. ವನ್ನು ಕಳವುಗೈದಿದ್ದಾರೆ.
ಇಬ್ರಾಹಿಂ ರ ಪತ್ನಿ ಹಾಗೂ ಮಕ್ಕಳು ಶಾಲೆಗೆ ಹಾಗೂ ಕಾಲೇಜಿಗೆ ಸೋಮವಾರ ರಜೆಯಾಗಿರುವ ಹಿನ್ನೆಲೆಯಲ್ಲಿ ರವಿವಾರದಂದು ಕುಟುಂಬಸ್ಥರ ಮನೆಗೆ ತೆರಳಿದ್ದರು. ಸೋಮವಾರ ಸಂಜೆ 3 ಗಂಟೆಯಾಗುವಾಗ ಮನೆಗೆ ಮರಳಿದಾಗ ಮನೆಯ ಹಿಂಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಒಳಗೆ ಹೋಗಿ ನೋಡಿದಾಗ ಕಪಾಟನ್ನು ಚೆಲ್ಲಾಪಿಲ್ಲಿಗೊಳಿಸಿ ಹಣವನ್ನು ಕಳವುಗೈದಿರುವುದು ಖಚಿತಗೊಂಡಿದೆ.
ಶ್ವಾನದಳ ಕಳ್ಳರನ್ನು ಪತ್ತೆ ಹಚ್ಚದಿರಲು ಮನೆಯೊಳಗೆ ಕೆಂಪು ಮೆಣಸನ್ನು ಹಾಕಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಂಜೇಶ್ವರ ಪರಿಸರಗಳಲ್ಲಿ ಕಳ್ಳತನ ಮತ್ತೆ ವ್ಯಾಪಕಗೊಂಡಿದೆ. ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದರೆ ಕಳ್ಳರನ್ನು ಹಿಡಿಯಲು ಸಾಧ್ಯವಿದೆ ಎಂಬುದಾಗಿ ನಾಗರಿಕರು ಆಡಿಕೊಳ್ಳುತಿದ್ದಾರೆ..
Click this button or press Ctrl+G to toggle between Kannada and English