ಗಣಪತಿ ವಿಸರ್ಜನೆ ವೇಳೆ ತುಂಗಾ ನದಿಯಲ್ಲಿ ತೆಪ್ಪ ಮಗುಚಿ 13 ಮಂದಿ ನೀರುಪಾಲು

12:43 PM, Thursday, September 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

ganesha-idolಶಿವಮೊಗ್ಗ: ಗಣಪತಿ ವಿಸರ್ಜನೆ ವೇಳೆ ತುಂಗಾ ನದಿಯಲ್ಲಿ ತೆಪ್ಪ ಮಗುಚಿ 13 ಮಂದಿ ನೀರುಪಾಲಾದ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಗಣಪತಿ ವಿಸರ್ಜಿಸಲು ತೆಪ್ಪದಲ್ಲಿ ಸುಮಾರು 33 ಮಂದಿ ಹೋಗಿದ್ದು, 13 ಮಂದಿ ನದಿಯಲ್ಲಿ ಮುಳುಗಿದ್ದರೆ, ಉಳಿದ 20 ಮಂದಿ ಈಜಿ ದಡ ಸೇರಿದ್ದಾರೆ. ರಾತ್ರಿ 7 ಗಂಟೆಯವರೆಗೆ 7 ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಶವಗಳ ಪತ್ತೆಗೆ ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಯಲಿದೆ.

ಮೃತಪಟ್ಟವರೆಲ್ಲರೂ ಹಾಡೋನಹಳ್ಳಿ ಗ್ರಾಮದವರೇ ಆಗಿದ್ದು, ಮಂಜುನಾಥ್‌, ವೀರಭದ್ರ, ಶಿವಕುಮಾರ್‌, ವೀರೇಶ್‌, ಜೀವನ್‌, ಎಂ.ಎಸ್‌. ಗಣೇಶ್‌, ರಮೇಶ್‌, ನಯನ್‌, ಸಾಗರ್‌, ಚಂದ್ರಪ್ಪ, ಶಂಕರ, ಗಣೇಶ್‌, ಶಿವರಾಜ್‌ ನೀರುಪಾಲಾದವರು.

ಹಾಡೋನಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ನಾಲ್ಕು ಗೌರಿ-ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ತುಂಗಾ ನದಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಗ್ರಾಮದಲ್ಲಿ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ಮೆರವಣಿಗೆ ನಡೆಸಿ ಮಧ್ಯಾಹ್ನ 2.30ರ ವೇಳೆಗೆ ಮೆರವಣಿಗೆ ನದಿಪಾತ್ರಕ್ಕೆ ತಲುಪಿದೆ. ಮೂರ್ತಿಗಳನ್ನು ವಿಸರ್ಜಿಸಲು ನದಿ ಮಧ್ಯಕ್ಕೆ ಹೋಗಲು ಸುಮಾರು 20 ಜನ ಕೂರಬಲ್ಲ ತೆಪ್ಪವನ್ನು ತಯಾರಿಸಲಾಗಿತ್ತು. ಆದರೆ, ತೆಪ್ಪದಲ್ಲಿ 30ಕ್ಕೂ ಹೆಚ್ಚು ಜನ ಕುಳಿತು ದಡದಿಂದ 150 ಅಡಿ ದೂರಕ್ಕೆ ಸಾಗಿದ್ದರು.

ಇಲ್ಲಿ ನದಿ 50 ಅಡಿಗೂ ಹೆಚ್ಚು ಆಳವಿದ್ದು, ಮೊದಲು ಗೌರಿ, ನಂತರ ಗಣಪತಿ ವಿಗ್ರಹವನ್ನು ವಿಸರ್ಜನೆ ಮಾಡಿದ್ದಾರೆ. ಆದರೆ ದಡಕ್ಕೆ ಮರಳುವ ಸಂದರ್ಭದಲ್ಲಿ ತೆಪ್ಪದಲ್ಲಿ ನಿಂತಿದ್ದವರು ಆಯ ತಪ್ಪಿ ತೆಪ್ಪ ಒಂದು ಕಡೆಗೆ ವಾಲಿದ್ದರಿಂದ ತೆಪ್ಪ ಮುಳುಗಿ ದುರಂತ ನಡೆದಿದೆ.

ತೆಪ್ಪದಲ್ಲಿ ಇದ್ದವರಲ್ಲಿ ಈಜು ಬರುತ್ತಿ¤ದ್ದವರಲ್ಲಿ ಕೆಲವರು ಈಜಿ ದಡ ಸೇರಿದ್ದಾರೆ. ಆದರೆ ಈಜು ಬಾರದವರು ಕೆಲವರನ್ನು ಹಿಡಿದುಕೊಂಡಿದ್ದರಿಂದ ಈಜು ಗೊತ್ತಿದ್ದವರೂ ಮುಳುಗಿದ್ದಾರೆ. ಈ ಎಲ್ಲ ಘಟನೆಗಳಿಗೆ ದಡದಲ್ಲಿ ನಿಂತಿದ್ದ ಊರಿನವರು ಸಾಕ್ಷಿಯಾದರು. ಈ ಪೈಕಿ ಕೆಲವರು ನದಿಗೆ ಧುಮುಕಿ, ಮುಳುಗುತ್ತಿದ್ದವರ ರಕ್ಷಣೆಗೆ ಧಾವಿಸಿದರಾದರೂ ಘಟನಾ ಸ್ಥಳ ದಡದಿಂದ ಸುಮಾರು 150 ಅಡಿ ದೂರದಲ್ಲಿದ್ದುದರಿಂದ ಪ್ರಯತ್ನ ಫಲ ನೀಡಲಿಲ್ಲ.

ಸ್ಥಳೀಯರು ಹಾಗೂ ಶಿವಮೊಗ್ಗ ಅಗ್ನಿಶಾಮಕ ದಳದವರು ಮುಳುಗಿದವರ ಶೋಧನೆ ನಡೆಸಿದರು. ಸಂಜೆ ಆರು ಗಂಟೆ ಸುಮಾರಿಗೆ ಒಂದು ಶವ ಮಾತ್ರ ಸಿಕ್ಕಿದ್ದು, ಹರಿಹರದಿಂದ ಮುಳುಗು ತಜ್ಞರು ಬಂದ ಮೇಲೆ ಮತ್ತೆ ಆರು ಶವಗಳು ಸಿಕ್ಕವು.

ಸಂಜೆ 7 ಗಂಟೆ ಸುಮಾರಿಗೆ ಕತ್ತಲು ಆವರಿಸಿದ್ದರಿಂದ ಶವ ಶೋಧನಾ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಕಾರವಾರದಿಂದ ಇನ್ನಷ್ಟು ಮುಳುಗು ತಜ್ಞರನ್ನು ಕರೆಸಿ ಗುರುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಹುಡುಕಾಟ ನಡೆಸಲಾಗುವುದು ಎಂದು ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.

ನಾವು ಸುಮಾರು 22 ಜನ ಗೌರಿ-ಗಣೇಶ ವಿಸರ್ಜನೆಗೆಂದು ತೆಪ್ಪದಲ್ಲಿ ತುಂಗಾನದಿಗೆ ಹೋಗಿದ್ದೆವು. ಎರಡೂ ವಿಗ್ರಹ ವಿಸರ್ಜಿಸಿದ ಬಳಿಕ ಹಿಂತಿರುಗುವ ಹೊತ್ತಿನಲ್ಲಿ ತೆಪ್ಪ ಏಕಾಏಕಿ ಒಂದು ಕಡೆ ವಾಲಿಕೊಂಡಿತು. ಗಾಬರಿಕೊಂಡ ತೆಪ್ಪದಲ್ಲಿ ಇದ್ದವರು ಇನ್ನೊಂದು ಬದಿಗೆ ಸರಿದಾಗ ಇಡೀ ತೆಪ್ಪ ಮುಳುಗಿತು. ನಾನೂ ಸೇರಿದಂತೆ ಕೆಲವರು ತಕ್ಷಣವೇ ನೀರಿಗೆ ಧುಮುಗಿ ಈಜಿ ದಡ ಸೇರಿದೆವು. ಉಳಿದವರು ನೀರು ಪಾಲಾದರು.
ಸಂತೋಷ್‌, ಬದುಕುಳಿದ ಯುವಕ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English