ಮಂಗಳೂರು : ಮುಂಬಯಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿದ್ದ ಕಾಸರಗೋಡಿನ ಕುಂಬಳೆಯ ವಿಶ್ವನಾಥ ಶೆಟ್ಟಿ (36) ಯವರನ್ನು ಬುಧವಾರ ರಾತ್ರಿ ಮತ್ತು ಬರುವ ಪದಾರ್ಥ ನೀಡಿ. ಪ್ರಜ್ಞೆ ತಪ್ಪಿಸಿ ನಗದು ಹಾಗೂ ಚಿನ್ನಾಭರಣಗಳನ್ನು ಲೂಟಿಗೈಯಲಾಗಿದೆ. ಮಂಗಳೂರಿಗೆ ತಲುಪುವಾಗ ಅರೆ ಪ್ರಜ್ಞಾವಸ್ಥೆಯಲ್ಲಿ ಉಟ್ಟ ಬಟ್ಟೆ ಮತ್ತು ಮೊಬೈಲ್ ಫೋನ್ ಹೊರತು ಪಡಿಸಿ ಉಳಿದೆಲ್ಲವನ್ನೂ ಕಳೆದುಕೊಂಡಿದ್ದಾರೆ.
ಬುಧವಾರ ಮಧ್ಯಾಹ್ನ ಮುಂಬಯಿನ ಮಲಾಡ್‌ನಿಂದ ಖಾಸಗಿ ಸಂಸ್ಥೆಯ ವೋಲ್ವೊ ಬಸ್ಸನ್ನೇರಿದ ವಿಶ್ವನಾಥ ಶೆಟ್ಟಿ ಅವರು ಗುರುವಾರ ಪೂರ್ವಾಹ್ನ 10.30 ಕ್ಕೆ ಮಂಗಳೂರಿಗೆ ತಲುಪಿದಾಗ ಅವರು ಬಸ್ಸಿನಿಂದ ಇಳಿಯದೆ ಕುಳಿತಲ್ಲಿಯೇ ಇದ್ದರು. ಸಂಶಯಗೊಂಡ ಬಸ್ಸು ಸಿಬಂದಿ ಪರಿಶೀಲಿಸಿದಾಗ ವಿಶ್ವನಾಥ ಶೆಟ್ಟಿ ಅವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು ಮಾತ್ರವಲ್ಲದೆ ಅವರ ಕೈಕಾಲುಗಳಿಗೆ ಬಲ ಇರಲಿಲ್ಲ. ಮಾತೂ ಬರುತ್ತಿರಲಿಲ್ಲ. ಬಸ್ಸಿನ ಚಾಲಕ ಬಸ್ಸನ್ನು ಪಂಪ್‌ವೆಲ್‌ಗೆ ತಂದು ನಿಲ್ಲಿಸಿ ಬಳಿಕ ವಿಶ್ವನಾಥ ಶೆಟ್ಟಿ ಅವರ ಜೀಬಿನಲ್ಲಿದ್ದ ಮೊಬೈಲ್ ಫೋನ್‌ನ್ನು ತೆಗೆದು ಅದರಲ್ಲಿದ್ದ ಫೋನ್ ಸಂಖ್ಯೆಯನ್ನು ಹುಡುಕಿ ಫೋನ್ ಮಾಡಿದರು. ಕುಂಬಳೆಯ ತನ್ನ ಮನೆಯಲ್ಲಿದ್ದ ವಿಶ್ವನಾಥ ಶೆಟ್ಟಿ ಅವರ ಪತ್ನಿ ಲತಾ ಅವರು ಫೋನ್ ಕರೆಯನ್ನು ಸ್ವೀಕರಿಸಿದಾಗ ಬಸ್ ಸಿಬಂದಿ ವಿಷಯವನ್ನು ತಿಳಿಸಿದರು.
ವಿಶ್ವನಾಥ ಶೆಟ್ಟಿ ಅವರ ಸೋದರ ಪದ್ಮನಾಭ ಅವರು ತನ್ನ ಪತ್ನಿ ಮತ್ತು ಪಕ್ಕದ ಮನೆಯ ವ್ಯಕ್ತಿಯ ಜತೆ ಕೂಡಲೇ ಹೊರಟು 11.30 ಕ್ಕೆ ಮಂಗಳೂರಿನ ಪಂಪ್‌ವೆಲ್ ತಲುಪಿ ಬಸ್ಸಿನಲ್ಲಿದ್ದ ವಿಶ್ವನಾಥ ಶೆಟ್ಟಿ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಮನೆ ಮಂದಿ ಬಂದು ಪರಿಶೀಲಿಸಿದಾಗ ವಿಶ್ವನಾಥ ಶೆಟ್ಟಿ ಅವರು ಧರಿಸಿದ್ದ ಪ್ಯಾಂಟ್ ಮತ್ತು ಟಿಶರ್ಟ್ ಹಾಗೂ ಕಿಸೆಯಲ್ಲಿದ್ದ ಒಂದು ಮೊಬೈಲ್ ಫೋನ್ ಹೊರತು ಪಡಿಸಿ ಬೇರೇನೂ ಅವರ ಬಳಿ ಇರಲಿಲ್ಲ. ಅವರು ಧರಿಸಿದ್ದರೆನ್ನಲಾದ ಎರಡು ಚಿನ್ನದ ಉಂಗುರ, ಒಂದು ಚಿನ್ನದ ಸರ ಮತ್ತು ಕೈಯಲ್ಲಿದ್ದ ನಗದು ಮತ್ತು ಲಗ್ಗೇಜ್‌ನ್ನು ಕಳೆದು ಕೊಂಡಿದ್ದರು.
ವಿಶ್ವನಾಥ ಶೆಟ್ಟಿ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಅವರ ಬಳಿ ನಗದು ಎಷ್ಟಿತ್ತು, ಲಗ್ಗೇಜ್‌ನಲ್ಲಿ ಏನಿತ್ತು ಎನ್ನುವುದು ತಿಳಿದು ಬಂದಿಲ್ಲ. ಲಗ್ಗೇಜ್ ಬಸ್ಸಿನ ಮೇಲ್ಗಡೆ ಹಾಕಲಾಗಿತ್ತು ಎಂದು ಬಸ್ಸಿನ ಸಿಬಂದಿ ಹೇಳುತ್ತಿದ್ದಾರೆ ಎಂದು ಸಹೋದರ ಪದ್ಮನಾಭ ಶೆಟ್ಟಿ ತಿಳಿಸಿದ್ದಾರೆ.
ಮುಂಬಯಿನಲ್ಲಿ ಸಂಬಂಧಿಕರ ಹೊಟೇಲ್‌ನಲ್ಲಿ ಕಳೆದ 10 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ವಿಶ್ವನಾಥ ಶೆಟ್ಟಿ ಅವರು ಸುಮಾರು ಒಂದುವರೆ ವರ್ಷದ ಹಿಂದೆ ಊರಿಗೆ ಬಂದು ಮದುವೆಯಾಗಿ ಬಳಿಕ ಮುಂಬಯಿಗೆ ಹೋಗಿದ್ದರು. ಈ ವರ್ಷ ನಾಗರ ಪಂಚಮಿಯಂದು ಊರಿಗೆ ಹಿಂತಿರುಗಿದ್ದರು. ಇದೀಗ ಬಸ್ಸು ಪ್ರಯಾಣದ ವೇಳೆ ತನ್ನದೆಲ್ಲವನ್ನೂ ಕಳೆದು ಕೊಂಡದ್ದಲ್ಲದೆ ಆಸ್ಪತ್ರೆಗೂ ದಾಖಲಾಗಿ ಅದಕ್ಕೂ ಒಂದಿಷ್ಟು ಖರ್ಚು ಮಾಡ ಬೇಕಾದ ಪರಿಸ್ಥಿತಿ ವಿಶ್ವನಾಥ ಶೆಟ್ಟಿ ಅವರಿಗೆ ಬಂದಿದೆ.
ಬಸ್ಸು ಸಿಬಂದಿ ಮನೆಗೆ ಫೋನ್ ಮಾಡಿ ‘ವಿಶ್ವನಾಥ ಶೆಟ್ಟಿ ಅಸ್ವಸ್ಥರಾಗಿದ್ದಾರೆ. ನಿತ್ರಾಣರಾಗಿದ್ದು ಕೈಕಾಲುಗಳಿಗೆ ಬಲವಿಲ್ಲದ ಹಾಗಿದ್ದಾರೆ. ಸರಿಯಾಗಿ ಮಾತನಾಡಲು ಆಗುತ್ತಿಲ್ಲ’ ಎಂದು ತಿಳಿಸಿದ್ದರು. ಫೋನ್ ಕರೆ ಸ್ವೀಕರಿಸಿದ ಪತ್ನಿ ಲತಾ ಅವರು ”’ತನ್ನ ಗಂಡನನ್ನು ಆಸ್ಪತ್ರೆಗೆ ದಾಖಲಿಸಿ ಎಂದು ಬಸ್ಸು ಸಿಬಂದಿಗೆ ಮನವಿ ಮಾಡಿದ್ದರು. ಆದರೆ ಬಸ್ಸಿನವರು ಅದಕ್ಕೆ ಸಮ್ಮತಿಸಿಲ್ಲ. ಮನೆ ಮಂದಿ ಇಲ್ಲದೆ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದರು ಎಂದು ಪದ್ಮನಾಭ ಶೆಟ್ಟಿ ಆರೋಪಿಸಿದ್ದಾರೆ.
ಗುರುವಾರ ಬೆಳಗ್ಗೆ ಕಾಫಿ ತಿಂಡಿಗಾಗಿ ಭಟ್ಕಳದಲ್ಲಿ ಬಸ್ಸು ನಿಲ್ಲಿಸಿದಾಗ ವಿಶ್ವನಾಥ ಶೆಟ್ಟಿ ಅವರು ಹೊಟೇಲ್‌ನಲ್ಲಿ ಚಹಾ ಮತ್ತು ತಿಂಡಿ ಸೇವಿದ್ದಾರೆ ಎಂದು ಬಸ್ಸು ಸಿಬಂದಿ ಹೇಳುತ್ತಾರೆ. ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರು ವಿಶ್ವನಾಥ ಅವರಿಗೆ ಅಮಲು ಪದಾರ್ಥವನ್ನು ಮತ್ತು ಭರಿಸುವ ವಸ್ತು ಬಿಸ್ಕತ್ತು-ಚಾಕೊಲೇಟನ್ನು ತಿನ್ನಿಸಿ ದರೋಡೆ ಮಾಡಿರ ಬೇಕೆಂದು ಶಂಕಿಸಲಾಗಿದೆ.ಆಸ್ಪತ್ರೆಯಲ್ಲಿ ವೈದ್ಯರು ವಿಶ್ವನಾಥ ಶೆಟ್ಟಿ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಅದರ ವರದಿ ಬಂದ ಬಳಿಕ ಮತ್ತು ವಿಶ್ವನಾಥ ಶೆಟ್ಟಿ ಅವರು ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿ ಸರಿಯಾಗಿ ಮಾತನಾಡುವ ಸ್ಥಿತಿಗೆ ಬಂದ ಬಳಿಕ ಪ್ರಕರಣದ ಮಾಹಿತಿ ತಿಳಿಯಬೇಕಿದೆ.
Click this button or press Ctrl+G to toggle between Kannada and English