ಮಂಗಳೂರು: ಭೂ ಪರಿವರ್ತನೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ಪುತ್ತೂರು ನಗರ ಯೋಜನೆ ಇಲಾಖೆ ಉಪ ನಿರ್ದೇಶಕರನ್ನು ಭ್ರಷ್ಟಾಚಾರ ನಿಗ್ರಹದಳ ಬಂಧಿಸಿದೆ.
ಪುತ್ತೂರಿನ ಅರ್ಯಾಪು ಗ್ರಾಮದಲ್ಲಿ ವಾಸವಾಗಿರುವ ಪಿ.ಕೇಶವ ಸುವರ್ಣ ತಮ್ಮ ಜಮೀನನ್ನು ವಾಣಿಜ್ಯ ಪರಿವರ್ತನೆಗಾಗಿ ನಗರ ಅಭಿವೃದ್ಧಿ ಪ್ರಾಧಿಕಾರ, ಪುತ್ತೂರು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ನಗರ ಯೋಜನೆ ಪುತ್ತೂರು ಉಪ ನಿರ್ದೇಶಕಿ ಲಾವಣ್ಯ ಎಂಬವರು ಸದರಿ ಜಮೀನನ್ನು ವಾಣಿಜ್ಯ ಪರಿವರ್ತನೆಗಾಗಿ ಎನ್ಓಸಿ ನೀಡಲು 10,000 ಹಣ ನೀಡುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದರು. ಇದರನ್ವಯ ಏಪ್ರಿಲ್ 12ರಂದು ದೂರುದಾರರಿಂದ ರೂ 10,000ಗಳನ್ನು ಲಾವಣ್ಯ ಅವರು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುತ್ತಾರೆ. ಅವರನ್ನು ದಸ್ತಗಿರಿ ಮಾಡಲಾಗಿದೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಎಸಿಬಿ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಸುಧೀರ್ ಎಂ ಹೆಗಡೆ, ನಿರೀಕ್ಷಕ ಯೋಗೀಶ್ ಕುಮಾರ್, ಸಿಬ್ಬಂದಿಗಳಾದ ಉಮೇಶ್, ಹರಿಪ್ರಸಾದ್, ರಾಧಾಕೃಷ್ಣ ಡಿ.ಎ, ಪ್ರಶಾಂತ್ ಎಂ., ರಾಧಾಕೃಷ್ಣ, ವೈಶಾಲಿ, ರಾಕೇಶ್ ವಾಗ್ಮನ್, ರಾಜೇಶ್, ಗಣೇಶ್ ಭಾಗವಹಿಸಿದ್ದರು.
Click this button or press Ctrl+G to toggle between Kannada and English