ಮಂಗಳೂರು : ಗೂಡ್‌ಶೆಡ್ ರಸ್ತೆ ಹಾಗೂ ರೊಸಾರಿಯೋ ಚರ್ಚ್ ಕಂಪೌಂಡ್ ನಿವಾಸಿಗಳು ಈ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದು, ಈ ಪ್ರದೇಶದ ಸುತ್ತ ಧಾರ್ಮಿಕ ಕೇಂದ್ರಗಳಾದ ಸೋಮನಾಥ ಮಂದಿರ, ರಾಜಲಕ್ಷ್ಮಿ ಮಂದಿರ, ಚಿನ್ಮಯ ಮಿಷನ್, ರೊಸಾರಿಯೋ ಚರ್ಚ್ ಇನ್ನಿತರ ಧಾರ್ಮಿಕ ಕೇಂದ್ರಗಳು ಹಾಗೂ ವಿದ್ಯಾಸಂಸ್ಥೆಗಳಾದ ರೊಸಾರಿಯೋ ಶಾಲೆ, ಸೈಂಟ್ ಆನ್ಸ್ ಶಾಲೆ, ದ.ಕ.ಜಿ.ಪ ನೀರೇಶ್ವಾಲ್ಯ ಅದಲ್ಲದೆ ಶಿಕ್ಷಕಿಯರ ತರಬೇತಿ ಸಂಸ್ಥೆಗಳಿದ್ದು, ಅದರೊಂದಿಗೆ ಕೆನರಾ ಬ್ಯಾಂಕ್, ಮಹಾಲಕ್ಷ್ಮಿ ಕೋ-ಅಪರೇಟಿವ್ ಸೊಸೈಟಿಗಳೊಂದಿಗೆ ಹಿರಿಯ ನಾಗರಿಕರ ವಸತಿ ನಿಲಯಗಳೊಂದಿಗೆ ಇಲ್ಲಿನ ಜನರು ತಮ್ಮ ಜೀವನವನ್ನು ನಡೆಸುತ್ತಾ ಇದ್ದಾರೆ. ಈ ಪ್ರಕಾರ ಇವರು ಒಂದು ತರಹದ ನೆಮ್ಮದಿ ಜೀವನವನ್ನು ಈ ಜನನಿಬಿಡ ಪ್ರದೇಶದಲ್ಲಿ ಸಾಗಿಸುತ್ತಿರುವಾಗ ಇದೀಗ ದೊಡ್ಡ ಸಮಸ್ಯೆಗಳು ತಲೆದೋರಿದ್ದು, ಇವರ ನೆಮ್ಮದಿಯ ಜೀವನವನ್ನು ಪೂರ್ತಿ ಹಾಳು ಮಾಡಿದೆ ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಹೇಳಿದರು.
ಗೂಡ್‌ಶೆಡ್ ಬಳಿ ಅವೈಜ್ಞಾನಿಕ ರೈಲ್ವೇ ಟ್ರಾಕ್ ನಿರ್ಮಾಣ ಹಾಗೂ ಪರಿಸರ ಮಾಲಿನ್ಯ ತಡೆಗೆ ನಡೆಸಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ನಡೆಸಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಪ್ರದೇಶದಲ್ಲಿ ಗೂಡ್ಸ್ ರೈಲುಗಳು ಮೊದ ಮೊದಲು 2-3 ದಿವಸಕ್ಕೊಮ್ಮೆ ಬಂದು ಹೋಗುತ್ತಿದ್ದವು. ಆದರೆ ಈಗ ದಿನನಿತ್ಯ ಎಂಬಂತೆ ರೈಲುಗಳು ಬರುತ್ತಿವೆ. ಅವುಗಳು ಎಂಜಿನ್ ಹೊಗೆ ಕಾರುತ್ತಾ ಅನೇಕ ಗಂಟೆಗಳ ಕಾಲ ಕರ್ಕಶವಾದ ಧ್ವನಿ ಮಾಡುತ್ತಾ (ಹೆಚ್ಚಿನ ವೇಳೆ ಮಧ್ಯರಾತ್ರಿಯಿಂದ ಬೆಳಗ್ಗಿನ ಜಾವದ ತನಕ) ಎಂಜಿನನ್ನು ಚಾಲೂ ಸ್ಥಿತಿಯಲ್ಲಿಟ್ಟಿರುತ್ತಾರೆ. ಈ ಕೆಟ್ಟ ಶಬ್ಧ ಮಾಲಿನ್ಯದಿಂದ ಇವರಿಗೆ ರಾತ್ರಿ ನಿದ್ರೆ ಮರೀಚಿಕೆಯಾಗಿದೆ. ಪರೀಕ್ಷೆ ಸಮಯದಲ್ಲಿ ಸ್ಥಳೀಯರ ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಹಿರಿಯ ನಾಗರಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ರೀತಿ ಅನೇಕ ಸಮಸ್ಯೆಗಳು ಉಂಟಾಗುತ್ತಲೇ ಇವೆ. ಸ್ಥಳೀಯರು ಈ ವಿಷಯವನ್ನು ಈ ಮೊದಲು ಕೂಡಾ ಸಂಬಂಧಪಟ್ಟವರ ಗಮನಕ್ಕೆ ತಂದಿರುತ್ತಾರೆ. ಆದರೂ ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸಲಿಲ್ಲ. ಪ್ರತಿ ಬಾರಿಯೂ ಸಂಬಂಧಪಟ್ಟವರಲ್ಲಿ ವಿನಂತಿಸಿದಾಗ ರೈಲ್ವೆ ಗೂಡ್ಸ್ ಆಫೀಸನ್ನು ಸೋಮೇಶ್ವರಕ್ಕೆ ವರ್ಗಾಯಿಸುವುದಾಗಿ ಕೇವಲ ಭರವಸೆಯನ್ನು ಕೊಡುತ್ತಿರುತ್ತಾರೆ. ಆದರೆ ಈಗ ಈ ಸಮಸ್ಯೆಯು ಮತ್ತಷ್ಟು ಉಲ್ಭಣಿಸಿದೆ.
ಈಗ ಇದೇ ಜಾಗದಲ್ಲಿ ಹೊಸ ರೈಲ್ವೆ ಹಳಿಯನ್ನು ಹಾಕುವ ಕಾಮಗಾರಿ ನಡೆಯುತ್ತಿದ್ದು, ಅದೂ ಕೂಡಾ ರಸ್ತೆಯ ಅಂಚಿನಲ್ಲಿ ಅಂದರೆ ಜನರು ವಾಸಿಸುವ ಪ್ರದೇಶಕ್ಕೆ ಇನ್ನೂ ಹತ್ತಿರದಲ್ಲಿ ಪ್ರಾರಂಭಿಸಲು ಹೊರಟಿರುತ್ತಾರೆ. ಒಂದು ವೇಳೆ ರಸ್ತೆಯ ಪಕ್ಕದಲ್ಲಿ ಹಳಿಯಾದರೆ ಜನರು ವಾಸಿಸುವ ಮನೆಗಳಿಗೆ ೨೦-೩೦ ಅಡಿ ಅಂತರದಲ್ಲಿವೆ. ಇದರಿಂದ ಮನೆಗಳು ಬಿರುಕು ಬಿಟ್ಟು ಮನೆಯಲ್ಲಿ ವಾಸ ಮಾಡುವ ಜನರಿಗೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ. ಈ ಮೊದಲೇ ಮನೆಗಳು ಬಿರುಕು ಬಿಟ್ಟು ಬೀಳು ಬೀಳು ಸ್ಥಿತಿಯಲ್ಲಿದೆ. ರಸ್ತೆ ಬದಿಯ ಚರಂಡಿಗಳು ಹೊಸದಾಗಿ ನಿರ್ಮಿಸುವ ಹಳಿಗಳ ಪಕ್ಕದಲ್ಲಿದ್ದು(೫-೬ ಅಡಿಗಳ ಅಂತರದಲ್ಲಿ), ಅದರ ಕಾಮಗಾರಿ ನಡೆಸಲು ಅನಾನುಕೂಲವಾಗಿದ್ದು, ಮಳೆಯ ನೀರು ರಸ್ತೆಯಲ್ಲಿ ಹರಿದು ಹೋಗುವಂತಹ ಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ಈ ಪ್ರದೇಶದ ನಿವಾಸಿಗಳು, ಶಾಲಾ ವಿದ್ಯಾರ್ಥಿಗಳಿಗೂ ನಡೆದಾಡಲು ಸಮಸ್ಯೆಯಾಗಬಹುದು. ಅದರೊಂದಿಗೆ ರೈಲ್ವೇ ಗೂಡ್ಸ್‌ನಲ್ಲಿ ಸಿಮೆಂಟ್‌ನ ಧೂಳಿನಿಂದ ಮನೆಯಲ್ಲಿ ಸೇವಿಸುವ ಆಹಾರ ಪದಾರ್ಥಗಳು ಧೂಳಿನಿಂದ ಕೂಡಿದ್ದು, ಸೇವಿಸಲು ಯೋಗ್ಯವಾಗಿಲ್ಲದಿದ್ದರೂ ಅದನ್ನು ಸೇವಿಸಬೇಕಾದ ಅನಿವಾರ‍್ಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳು ಬರುವುದರಿಂದ ಈ ಹಳಿಗಳನ್ನು ಗೂಡ್ಸ್ ಆಫೀಸಿನ ಇನ್ನೊಂದು ಬದಿಯಲ್ಲಿ ಜನರು ವಾಸಿಸದ ಸ್ಥಳದಲ್ಲಿ ನಿರ್ಮಿಸಬಹುದಾಗಿದೆ. ಆದರೆ ಹಳಿಯನ್ನು ಹಾಕುವ ಕಾಮಗಾರಿ ಯಾವುದೇ ತಪ್ಪು ಮಾಹಿತಿಯಿಂದ ಅವೈಜ್ಞಾನಿಕವಾಗಿ ತ್ವರಿತ ಗತಿಯಲ್ಲಿ ನಡೆಯುತ್ತಾ ಇದೆ.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಡಳಿತ, ರೈಲ್ವೇ ಇಲಾಖೆಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪುರವರು ತಿಳಿಸಿದರು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸ್ಥಳೀಯ ಕಾರ್ಪೋರೇಟರಾದ ಶ್ರೀ ಅಬ್ದುಲ್ ಲತೀಪ್ ಕಂದಕ್, ರೊಜಾರಿಯೋ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ಫಾ| ಜೆ.ಬಿ ಕ್ರಾಸ್ತಾ, ಗಿಲ್ಬರ್ಟ್ ಡಿಸಿಲ್ವಾ, ಫ್ರಾನ್ಸಿಸ್ ಡಿಸೋಜ, ದಿನಕರ್ ಶೆಟ್ಟಿ ಗುರುದತ್ ಶೆಣೈ ಮಾತನಾಡಿದರು. ತು.ರ.ವೇ ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜಪ್ಪು, ತು.ರ.ವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ ಸಿರಾಜ್ ಅಡ್ಕರೆ, ಹರೀಶ್ ಶೆಟ್ಟಿ ಶಕ್ತಿನಗರ, ಆನಂದ್ ಅಮೀನ್ ಅಡ್ಯಾರ್, ರೇಷ್ಮಾ ಉಳ್ಳಾಲ್, ನಿಶಾದ್ ಎಮ್ಮೆಕೆರೆ, , ಭೂಷನ್ ಕುಲಾಲ್, ಗಂಗಾಧರ್ ಅತ್ತಾವರ್, ಪುರಂದರ್ ರೈ, ಸಂತೋಷ್ ರೈ, ಕೆ.ಜೆ ಪಿಂಟೋ, ಪ್ರದೀಪ್, ವಸಂತ ಶೆಟ್ಟಿ, ದಯಾನಂದ, ಮುನವ್ವರ್, ಲೋಕನಾಥ, ಕಾಂಚನಾ, ಎಲಿಝಾಬೆತ್ ರೋಚ್, ಜೋಸೆಫ್, ಅಲೆಕ್ಸ್, ಶಶಿಕುಮಾರ್ ಸುಭಾಷ್ ನಗರ, ಶಾಂತ ಮುಂತಾದವರು ಉಪಸ್ಥಿತರಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರೈಲ್ವೇ ಏರಿಯಾ ಆಫೀಸರ್ ಶ್ರೀಯುತ ನೋಬರ್ಟ್‌ರವರು ಮನವಿ ಸ್ವೀಕರಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
Click this button or press Ctrl+G to toggle between Kannada and English