ಮಂಗಳೂರು: ನಗರೀಕರಣ, ಕೈಗಾರೀಕರಣದಿಂದ ಕೃಷಿ ಭೂಮಿ ನಾಶವಾಗುತ್ತಿದ್ದರೂ ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಇನ್ನೂ ದುಡಿಯುವವರಿದ್ದಾರೆ. ಆದರೆ, ಅಲ್ಲೂ ಕೂಲಿ ಕಾರ್ಮಿಕರ ಕೊರತೆ. ಈ ಸಮಸ್ಯೆಯನ್ನು ಸರಿದೂಗಿಸಲು ರೈತರೇ ಒಂದು ಉಪಾಯ ಕಂಡುಕೊಂಡಿದ್ದಾರೆ.
ಹಿಂದೆಲ್ಲಾ ಭತ್ತದ ತೆನೆ ಕಟಾವು ಮಾಡಿ ಮನೆಯಂಗಳಕ್ಕೆ ರಾಶಿ ಹಾಕಿದರೆ ಸಾಕು, ಅಲ್ಲಿಯೇ ಪಡಿ (ಭತ್ತ ಬೇರ್ಪಡಿಸಲು ಬಳಸುವ ಸಾಧನ) ಬಡಿಯುತ್ತಿದ್ದರು. ಭತ್ತ ಕುಟ್ಟಿ ಮುಡಿ ಕಟ್ಟುತ್ತಿದ್ದರು. ಆದರೆ, ಈಗ ಹಾಗಲ್ಲ. ಪಡಿಯನ್ನೇ ಗದ್ದೆ ಬಳಿಯಿಟ್ಟು ಭತ್ತ ಬೇರ್ಪಡಿಸುತ್ತಿದ್ದಾರೆ.
ನೀರಿನ ಅಭಾವದಿಂದಾಗಿ ತಮ್ಮೂರಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಉತ್ತರ ಕನರ್ನಾಟಕದ ಹೆಂಗಸರು ದುಡಿಮೆಗೆ ಮಂಗಳೂರಿನತ್ತ ವಲಸೆ ಬರುತ್ತಿದ್ದಾರೆ. ಹೀಗೆ ಬಂದವರು ಮಂಗಳೂರು ಹೊರವಲಯದಲ್ಲಿರುವ ಗುರುಪುರ, ಗಂಜಿಮಠ, ಕೈಕಂಬದಂತಹ ಊರಿನಲ್ಲಿ ದಿನಕ್ಕೆ 320ರೂ., ಮಧ್ಯಾಹ್ನ ಊಟ, ಎರಡು ಹೊತ್ತು ಚಹಾ-ತಿಂಡಿ ನೀಡಿದರೆ ಸಾಕು. ಬೆಳಗ್ಗೆ 9.30ರಿಂದ ಸಂಜೆ ನಾಲ್ಕು ಗಂಟೆಯವರೆಗೆ ಗದ್ದೆ ಕೆಲಸ ಮಾಡುತ್ತಾರೆ. ಹಳ್ಳಿಗಳಲ್ಲಿ ಈ ಕೆಲಸ ಮಾಡೋದಕ್ಕೆ ಊರಲ್ಲಿ ಯಾರೂ ಬರುತ್ತಿಲ್ಲ. ಹಾಗಾಗಿ ಪರವೂರಿನವರನ್ನೇ ಕೂಲಿ ಕೆಲಸಕ್ಕೆ ನೇಮಿಸುತ್ತೇವೆ ಎನ್ನುತ್ತಾರೆ ಕೃಷಿಕ ಸತೀಶ್ ಕಾವ.
ಇರುವ ಸ್ವಲ್ಪ ಜಮೀನನ್ನು ಪಾಳು ಬಿಡಬಾರದೆಂದುಕೊಂಡರೆ ಕೃಷಿ ಮಾಡಲು ಹರಸಾಹಸ ಪಡಬೇಕು. ಇಲ್ಲಿ ಕೂಲಿ ಕೆಲಸಕ್ಕೆ ಜನ ಸಿಗುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಹೊರಗಿನಿಂದ ಬಂದವರೂ ಹೆಚ್ಚು ಕೂಲಿಗೆ ಬೇಡಿಕೆ ಇಡುತ್ತಿದ್ದಾರೆ. ಇನ್ನು ಬೆಳೆದು ನಿಂತ ತೆನೆಯನ್ನು ಮೈಲುಗಟ್ಟಲೆ ದೂರದಲ್ಲಿರುವ ಮನೆಗೆ ತಂದು ಅಲ್ಲಿ ಭತ್ತ ಬೇರ್ಪಡಿಸಬೇಕೆಂದರೆ ಕೂಲಿ ಮೊತ್ತವನ್ನು ಮತ್ತಷ್ಟು ಏರಿಸುತ್ತಾರೆ. ಅದಕ್ಕೆ ಕೃಷಿಕರು ಗದ್ದೆ ಬಳಿಯೇ ಪಡಿಯಿಡುತ್ತಿದ್ದಾರೆ.
ಮಾನವ ಶಕ್ತಿಗಿಂತ ಯಂತ್ರವೇ ಸುಲಭ ಮತ್ತು ಅಗ್ಗದ್ದು ಎಂದುಕೊಂಡವರಿಗೂ ಯಂತ್ರದಿಂದ ಕಟಾವು ಮಾಡಿದ ಭತ್ತದ ಪ್ರಮಾಣ, ಬೈಹುಲ್ಲಿನ ನಷ್ಟ ಅಳೆದು ತೂಗಿದರೆ ಕೃಷಿಕರು ಈಗ ಕೈಗೊಂಡಿರುವ ಉಪಾಯವೇ ಹೆಚ್ಚು ಸೂಕ್ತವಾಗಿದೆ.
ನಗರವನ್ನೇ ಆಪೋಷಣಗೈದಿರುವ ರಿಯಲ್ ಎಸ್ಟೇಟ್ ದಂಧೆ ಇನ್ನು ನಗರದಿಂದ ಹೊರಗೂ ಚಾಚುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಭೂಮಿ ಮೇಲಿನ ಪ್ರೀತಿಗಾಗಿ ಕೃಷಿಯಿಂದ ನಾನಾ ಸಂಕಷ್ಟ ಎದುರಾದರೂ ಕೃಷಿಯನ್ನು ಸಂಪೂರ್ಣ ತೊರೆಯದಿರುವ ರೈತರು ಇನ್ನೂ ಇದ್ದಾರೆಂಬುದೇ ಸಮಾಧಾನಕರ ಅಂಶ.
Click this button or press Ctrl+G to toggle between Kannada and English