ಕಂಠಪೂರ್ತಿ ಕುಡಿದು ವಿಮಾನ ಚಲಾಯಿಸಲಿದ್ದ ಟರ್ಕಿ ಪೈಲಟ್‌!

3:19 PM, Thursday, January 18th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

drinkingಮಂಗಳೂರು: ಮಂಗಳೂರಿನಿಂದ 180 ಮಂದಿ ಪ್ರಯಾಣಿಕರನ್ನು ಹೊತ್ತು ದುಬಾೖಗೆ ಮಂಗಳವಾರ ಮಧ್ಯರಾತ್ರಿ ಹೊರಡಬೇಕಿದ್ದ ಸ್ಪೈಸ್‌ ಜೆಟ್‌ ವಿಮಾನದ ಮುಖ್ಯ ಮಹಿಳಾ ಪೈಲಟ್‌ ಅತಿಯಾದ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಪರಿಣಾಮ ಸುಮಾರು ಐದು ತಾಸು ತಡವಾಗಿ ವಿಮಾನ ಟೇಕ್‌ಆಫ್ ಆದ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ಏಳೆಂಟು ತಿಂಗಳಿಂದ ಪದೇ ಪದೆ ಒಂದಲ್ಲ ಒಂದು ರೀತಿಯ ಇಂತಹ ಎಡವಟ್ಟು ಸಂಭವಿಸುತ್ತಿದ್ದು, ಅದಕ್ಕೆ ಮತ್ತೂಂದು ಸೇರ್ಪಡೆಯೇ ಕಂಠ ಪೂರ್ತಿ ಕುಡಿದು ವಿಮಾನ ಚಲಾಯಿಸಲು ಬಂದ ಮಹಿಳಾ ಪೈಲಟ್‌ ಒಬ್ಬರು ಸೃಷ್ಟಿಸಿದ ಅವಾಂತರ. ಇದರಿಂದ ಮಂಗಳೂರು-ದುಬಾೖ ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರು ಮಂಗಳವಾರ ಮಧ್ಯರಾತ್ರಿಯಿಂದ ಬೆಳಗಾಗುವ ತನಕ ನಿಲ್ದಾಣದಲ್ಲೇ ತೂಕ‌ಡಿಸುತ್ತ ಕುಳಿತು ಕೊಳ್ಳಬೇಕಾಯಿತು. ಸುಮಾರು ಐದು ಗಂಟೆಗಳ ಅನಂತರ ಬದಲಿ ಪೈಲಟ್‌ನ ವ್ಯವಸ್ಥೆಯೊಂದಿಗೆ ವಿಮಾನ ಟೇಕ್‌ಆಫ್ ಆಗಿದೆ.

ಈ ವಿಮಾನವು ಮಂಗಳವಾರ ರಾತ್ರಿ 12.40ಕ್ಕೆ ದುಬಾೖಗೆ ಹೊರಡಬೇಕಿತ್ತು. 180 ಮಂದಿ ಪ್ರಯಾಣಿಕರು ಬೋರ್ಡಿಂಗ್‌ ಆಗುವುದಕ್ಕೆ ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್‌ ಮುಗಿಸಿ ಕಾದು ಕುಳಿತಿದ್ದರು. ನಿಗದಿತ ಸಮಯಕ್ಕೆ ಹಾರಾಡುವುದಕ್ಕೆ ರನ್‌ವೇನಲ್ಲಿಯೂ ಎಲ್ಲ ರೀತಿಯ ತಯಾರಿ ನಡೆಸಲಾಗಿತ್ತು.

ಪ್ರಯಾಣಿಕರು ಬೋರ್ಡಿಂಗ್‌ ಆಗುವುದಕ್ಕೂ ಎರಡು ತಾಸು ಮೊದಲು ಆ ವಿಮಾನದ ಪೈಲಟ್‌ ಅನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ಪ್ರಕಾರ, ಮಂಗಳೂರು-ದುಬಾೖ ವಿಮಾನವನ್ನು ಹಾರಾಡಿಸಬೇಕಾಗಿದ್ದ ಟರ್ಕಿ ದೇಶದ ಮುಖ್ಯ ಮಹಿಳಾ ಪೈಲಟ್‌ ಅನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಆಗ ಆಕೆಯು ಕಂಠಪೂರ್ತಿ ಕುಡಿದಿರುವ ವಿಚಾರ ವೈದ್ಯಾಧಿಕಾರಿಗಳ ಗಮನಕ್ಕೆ ಬಂತು.

ತನ್ನ ಮೇಲೆ ನಿಯಂತ್ರಣವಿಲ್ಲದಷ್ಟರ ಮಟ್ಟಿಗೆ ಮದ್ಯ ಸೇವನೆ ಮಾಡಿರುವುದು ಗೊತ್ತಾದ ತತ್‌ಕ್ಷಣಕ್ಕೆ ಎಚ್ಚೆತ್ತುಕೊಂಡ ವಿಮಾನ ನಿಲ್ದಾಣದ ಸಂಬಂಧಪಟ್ಟ ಅಧಿಕಾರಿಗಳು, ಈ ಮೊದಲು ನಿಗದಿಪಡಿಸಿದ್ದ (ಮಧ್ಯರಾತ್ರಿ 12.40) ಮಂಗಳೂರು-ದುಬಾೖ ವಿಮಾನ ಹಾರಾಟದ ವೇಳೆಯನ್ನು ರದ್ದುಪಡಿಸಿದ್ದಾರೆ. ಜತೆಗೆ ಮಿತಿ ಮೀರಿ ಮದ್ಯ ಸೇವನೆ ಮಾಡಿದ್ದ ಸುಮಾರು 35 ವರ್ಷದ ಟರ್ಕಿಯ ಆ ಮಹಿಳಾ ಪೈಲಟ್‌ ವಿರುದ್ಧವೂ ನಿಯಮಾನುಸಾರ ಕ್ರಮ ಜರಗಿಸಲು ಸಂಬಂಧಪಟ್ಟ ವಿಮಾನ ಕಂಪೆನಿಯ ಅಧಿಕಾರಿಗಳು ಮುಂದಾಗಿದ್ದಾರೆ .

ಸ್ಪೈಸ್‌ ಜೆಟ್‌ನ ಈ ವಿಮಾನವು ನಿಗದಿತ ಸಮಯಕ್ಕೆ ಏಕೆ ಟೇಕ್‌ಅಪ್‌ ಆಗಿಲ್ಲ ಎನ್ನುವುದಕ್ಕೆ ಪ್ರಯಾಣಿಕರಿಗೆ ನಿಜವಾದ ಕಾರಣ ಗೊತ್ತಾಗಿಲ್ಲ. ತಾಂತ್ರಿಕ ದೋಷದ ಕಾರಣದಿಂದ ಮಂಗಳೂರು-ದುಬಾೖ ವಿಮಾನ ಹಾರಾಟ ವಿಳಂಬವಾಗಿರುವುದಾಗಿ ಅಧಿಕೃತ ಘೋಷಣೆ ಮಾಡಿದ್ದು, ಆ ವಿಚಾರವನ್ನೇ ಪ್ರಯಾಣಿಕರಿಗೂ ಮನವರಿಕೆ ಮಾಡಲಾಗಿದೆ.

ಈ ನಡುವೆ ಪೈಲಟ್‌ ಒಬ್ಬರು ಮಿತಿಮೀರಿ ಮದ್ಯಪಾನ ಮಾಡಿಕೊಂಡು ವಿಮಾನ ಚಲಾಯಿಸುವುದಕ್ಕೆ ಬಂದಿದ್ದ ವಿಚಾರ ವಿಮಾನ ನಿಲ್ದಾಣದ ಸಿಬಂದಿಗೆ ಗೊತ್ತಾಗಿದೆ. ಅಲ್ಲದೆ, ಪೈಲಟ್‌ ಮಾಡಿದ ಈ ಎಡವಟ್ಟಿನಿಂದಾಗಿ ವಿಮಾನ ನಿಲ್ದಾಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರಾತ್ರಿಯೆಲ್ಲ ನಿದ್ದೆಗೆಡುವ ಪ್ರಮೇಯ ಸೃಷ್ಟಿಯಾಗಿತ್ತು.

ವಿಮಾನದ ತಾಂತ್ರಿಕ ದೋಷ ಗಂಟೆಯೊಳಗೆ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಮಧ್ಯರಾತ್ರಿಯಿಂದ ಎದುರು ನೋಡುತ್ತ ಕಾದು ಕುಳಿತಿದ್ದವರೆಲ್ಲ ಬೆಳಗ್ಗಿನ ತನಕ ಹಾಗೆಯೇ ಕುಳಿತುಕೊಂಡಿದ್ದರು. ಕೊನೆಗೂ ಬುಧವಾರ ಬೆಳಗ್ಗೆ 6.05ಕ್ಕೆ ವಿಮಾನ ಟೇಕ್‌ಅಪ್‌ ಆಗುವುದಕ್ಕೆ ರನ್‌ವೇ ಸ್ಥಳಾವಕಾಶ ಲಭಿಸಿದ್ದು, ಬದಲಿ ಪೈಲಟ್‌ ನಿಯೋಜನೆಯೊಂದಿಗೆ ವಿಮಾನವು ದುಬಾೖಗೆ ಹಾರಾಟ ನಡೆಸಿದೆ.

ಒಂದು ವೇಳೆ ವಿಮಾನದ ಪೈಲಟ್‌ ಮದ್ಯಸೇವನೆ ಮಾಡಿರುವುದು ವೈದ್ಯಾಧಿಕಾರಿಗಳ ಗಮನಕ್ಕೆ ಬಾರದೆ ಹೋಗಿದ್ದರೆ ಮದ್ಯದ ಅಮಲಿನಲ್ಲಿ ವಿಮಾನ ಚಲಾಯಿಸಿ ದೊಡ್ಡ ಅನಾಹುತಕ್ಕೆ ಎಡೆಯಾಗುವ ಅಪಾಯ ಇತ್ತು. ಈ ವಿಮಾನದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಬಹುತೇಕ ಎಲ್ಲ ಸಿಬಂದಿ ಕೂಡ ಟರ್ಕಿ ದೇಶದವರೇ ಆಗಿದ್ದರೂ ವೈದ್ಯರ ಕಟ್ಟು ನಿಟ್ಟಿನ ತೀರ್ಮಾನವು ಪೈಲಟ್‌ ಮದ್ಯ ಸೇವನೆ ಮಾಡಿ ವಿಮಾನ ಚಲಾಯಿಸುವ ಸಂದರ್ಭವನ್ನು ತಪ್ಪಿಸುವ ಮೂಲಕ ಮಂಗಳೂರು-ದುಬಾೖ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದ ಎಲ್ಲ ಪ್ರಯಾಣಿಕರನ್ನು ಬಚಾವ್‌ ಮಾಡಿರುವುದು ಗಮನಾರ್ಹ.

ಮಂಗಳೂರು-ದುಬಾೖ ಸ್ಪೈಸ್‌ ವಿಮಾನ ಸುಮಾರು ಒಂದು ವರ್ಷದಿಂದ ಮಂಗಳೂರಿನಿಂದ ಹಾರಾಟ ನಡೆಸುತ್ತಿದೆ. ಈ ವಿಮಾನವು ಟರ್ಕಿ ದೇಶದ ಕಾರ್ಡೊಲ್‌ ಕಂಪೆನಿಗೆ ಸೇರಿದ್ದಾಗಿದ್ದು, ಸ್ಪೈಸ್‌ ಜೆಟ್‌ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ನಮ್ಮ ದೇಶದಲ್ಲಿ ತನ್ನ ವಿಮಾನಗಳನ್ನು ಹಾರಾಟ ನಡೆಸುತ್ತಿದೆ. ಈ ಕಾರಣದಿಂದಾಗಿ ಮಂಗಳೂರು-ದುಬಾೖ ನಡುವೆ ಸಂಚರಿ ಸುವ ಈ ಸ್ಪೈಸ್‌ ಜೆಟ್‌ನಲ್ಲಿ ಪೈಲಟ್‌ನಿಂದ ಹಿಡಿದು ಹೆಚ್ಚಿನ ಸಿಬಂದಿ ಕೂಡ ಟರ್ಕಿ ಮೂಲದವರೇ ಆಗಿದ್ದಾರೆ. ಮೂಲಗಳ ಪ್ರಕಾರ, ಪಾನಮತ್ತರಾಗಿ ಸಿಕ್ಕಿಬಿದ್ದಿರುವ ಟರ್ಕಿ ಮೂಲದ ಈ ಮಹಿಳಾ ಪೈಲಟ್‌ ಸದ್ಯ ನಗರದಲ್ಲೇ ವಾಸ್ತವ್ಯ ಹೂಡಿದ್ದು, ಸಂಬಂಧಪಟ್ಟ ಮೇಲಧಿಕಾರಿಗಳಿಂದ ತನಿಖೆಗೆ ಒಳಗಾಗಿ ಆ ಬಗ್ಗೆ ಸೂಕ್ತ ತೀರ್ಮಾನ ಹೊರ ಬೀಳುವವರೆಗೂ ಆಕೆಗೆ ಯಾವುದೇ ವಿಮಾನ ಹಾರಾಟ ನಡೆಸುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English