ಮಂಗಳೂರು: ಮಹಾದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ಮಂಗಳೂರಿನಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಇಂದಿನ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಯಾವೊಂದು ಸಂಘಟನೆಗಳೂ ಬೆಂಬಲ ಘೋಷಿಸಿರದ ಹಿನ್ನೆಲೆಯಲ್ಲಿ ಬಂದ್ ಬಿಸಿ ಕರಾವಳಿ ಭಾಗಕ್ಕೆ ತಟ್ಟಿಲ್ಲ. ಜಿಲ್ಲೆಯಲ್ಲಿ ಬಂದ್ ಇಲ್ಲದಿದ್ದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ಮುಂಜಾನೆ ಸಂಚಾರ ಸ್ಥಗಿತಗೊಳಿಸಿದ್ದವು. ಇದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಸಾರ್ಜನಿಕರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮತ್ತೆ ಬಸ್ ಸಂಚಾರ ಆರಂಭಿಸಿದ್ದಾರೆ. ಚಿತ್ರಗಳು: ಮಹದಾಯಿಗಾಗಿ ಹೋರಾಟ, ಕರ್ನಾಟಕ ಬಂದ್ ಈ ನಡುವೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಧೋರಣೆ ವಿರೋಧಿಸಿ ತುಳು ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಸಾಮಾನ್ಯ ಜನಜೀವನ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ ಜೀವನ ಸಾಮಾನ್ಯವಾಗಿದೆ. ಎಂದಿನಂತೆ ಸರಕಾರಿ ಕಚೇರಿ, ಬ್ಯಾಂಕ್, ಆಸ್ಪತ್ರೆ, ಸೇರಿದಂತೆ ಶಾಲಾ-ಕಾಲೇಜುಗಳು ತೆರೆದಿವೆ. ಮಂಗಳೂರು ನಗರದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ.
ಹೋಟೆಲ್ ಗಳು ತೆರೆದಿದ್ದು, ಆಟೋರಿಕ್ಷಾಗಳು ಎಂದಿನಂತೆ ರಸ್ತೆಗಿಳಿದಿವೆ. ಕರಾವಳಿಯ ಲೈಫ್ ಲೈನ್ ಎಂದೇ ಕರೆಯುವ ಖಾಸಗಿ ಬಸ್ ಗಳು ಮುಂಜಾನೆಯಿಂದಲೇ ಎಂದಿನಂತೆ ಸಂಚಾರ ನಡೆಸುತ್ತಿವೆ. ತೊಂದರೆ ಅನುಭವಿಸಿದ ಗ್ರಾಮೀಣ ಜನ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಮುಂಜಾನೆ ಸಂಚಾರ ಸ್ಥಗಿತಗೊಳಿಸಿದ ಕಾರಣ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಸ್ವಲ್ಪ ತೊಂದರೆ ಅನುಭವಿಸಬೇಕಾಯಿತು.
ಆದರೆ ನಂತರ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮತ್ತೆ ಬಸ್ ಸಂಚಾರ ಆರಂಭಿಸಿದ್ದರಿಂದ ತೊಂದರೆ ತಪ್ಪಿತು. ‘ಪದೇ ಪದೇ ಬಂದ್ ಮಾಡಿ ಹೊಟ್ಟೆ ಮೇಲೆ ಹೊಡೆಯಬೇಡಿ’ ಪದೇ ಪದೇ ಬಂದ್ ಮಾಡುವುದರಿಂದ ಮಧ್ಯಮ ವರ್ಗ ಹಾಗೂ ಬಡವರ ಹೊಟ್ಟೆಗೆ ಪೆಟ್ಟು ಬೀಳುತ್ತದೆ ಎಂಬ ಅಭಿಪ್ರಾಯ ಕರಾವಳಿಗರಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ತಮ್ಮ ತಮ್ಮ ಅಂಗಡಿಗಳ ಹೊರಗೆ, ಹೋಟೆಲ್ ಗಳ ಮುಂದೆ, ಬಸ್ ಸ್ಟ್ಯಾಂಡ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ‘ನಿಮಗೆ ನೀರಿಲ್ಲ ನಮಗೆ ನೋವಿದೆ.
ಹಾಗಂತ ಪದೇ ಪದೇ ಬಂದ್ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ ಈ ಬಾರಿ ಬಂದ್ ಗೆ ನಮ್ಮ ಬೆಂಬಲವಿಲ್ಲ ‘ ಎಂಬ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದೆ. ರೈಲು ತಡೆ ಯತ್ನ ಕರ್ನಾಟಕ ಬಂದ್ ಕರೆಯ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಮಂಗಳೂರು ಘಟಕದ ಕಾರ್ಯಕರ್ತರು ಇಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲು ತಡೆದು ಸಾಂಕೇತಿಕ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಕರವೇ ಪ್ರತಿಭಟನೆ ಖಂಡಿಸಿ ತುಳುನಾಡ ರಕ್ಷಣಾ ವೇದಿಕೆ (ತುರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರವೇ ತುರವೇ ಮುಖಾಮುಖಿ ಕರವೇ ವಿರುದ್ಧ ತುರವೇ ಕಾರ್ಯಕರ್ತರು ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ಕರವೇ ಮತ್ತು ತುರವೇ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ನೇತ್ರಾವತಿ ನದಿ ತಿರುವು, ಎತ್ತಿನಹೊಳೆ ವಿರುದ್ಧ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡಿಲ್ಲ.
ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಬಿಡುವುದಿಲ್ಲ ಎಂದು ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟುಹಿಡಿದರು. ಈ ಹಿನ್ನೆಲೆಯಲ್ಲಿ ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣ ಮುಂಭಾಗ ಮಾತಿನ ಚಕಮಕಿ ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
Click this button or press Ctrl+G to toggle between Kannada and English