ಮಂಗಳೂರು: ಬೇಸಗೆ ರಜೆ ಸಮೀಪಿಸುತ್ತಿದ್ದಂತೆ ಕರಾವಳಿಯಲ್ಲಿ ಅದರಲ್ಲೂ ಮಂಗಳೂರು ನಗರ ಹಾಗೂ ಸುತ್ತಮುತ್ತ ಇರುವ ಬೀಚ್, ಧಾರ್ಮಿಕ ಕ್ಷೇತ್ರಗಳತ್ತ ಪ್ರವಾಸಿಗರು ಆಕರ್ಷಿತರಾಗುತ್ತಿದ್ದಾರೆ. ಈಗಾಗಲೇ ಕೆಲವು ಕಡೆಗಳಲ್ಲಿ ಶಾಲೆಗಳಿಗೆ ಬೇಸಗೆ ರಜೆ ದೊರೆತಿದ್ದು, ಒಂದು ವಾರದಿಂದ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿದೆ.
ಮಂಗಳೂರು ಅಂದರೆ, ಒಂದೆಡೆ ಬೇಸಗೆಯ ಧಗೆ; ಇನ್ನೊಂದೆಡೆ ಸುಂದರ ಕಡಲ ಕಿನಾರೆ ಜತೆಗೆ ಆಕರ್ಷಕ ಪ್ರವಾಸಿ ತಾಣಗಳು. ಹೀಗಾಗಿ, ಇಲ್ಲಿನ ಸುಡು ಬಿಸಿಲಿನ ಬೇಗೆಯನ್ನೂ ಲಕ್ಕಿಸದೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಈಗ ಇಲ್ಲಿನ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟು ಆಗಿದೆ.
ಮಂಗಳೂರಿಗೆ ಆಗಮಿಸುವ ಬಹುತೇಕ ಪ್ರವಾಸಿಗರು ಮೊದಲು ಭೇಟಿ ನೀಡುವುದು ಇಲ್ಲಿನ ಬೀಚ್‌ಗಳಿಗೆ. ಕೆಲವು ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಪಣಂಬೂರು ಮತ್ತು ತಣ್ಣೀರುಬಾವಿ ಬೀಚ್‌ಗಳಿಗೆ ಬರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಪಣಂಬೂರಿಗೆ ಸಾಮಾನ್ಯ ದಿನಗಳಲ್ಲಿ ಸುಮಾರು 1,000 ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಸದ್ಯ ಪ್ರತಿ ದಿನ ಸುಮಾರು 4,000ಕ್ಕೂ ಹೆಚ್ಚಿನ ಮಂದಿ ಬರುತ್ತಿದ್ದಾರೆ.
ವೀಕೆಂಡ್ ಬಂತೆಂದರೆ ಈ ಸಂಖ್ಯೆ ಸುಮಾರು 15,000 ದಾಟುತ್ತದೆ. ಇನ್ನು ಸುಲ್ತಾನ್ ಬತ್ತೇರಿ ಬೀಚ್‌ಗೆ ಪ್ರತಿನಿತ್ಯ ಸುಮಾರು 3,000 ಮಂದಿ ಆಗಮಿಸುತ್ತಾರೆ. ವೀಕೆಂಡ್‌ಗಳಲ್ಲಿ 10,000 ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಪ್ರವಾಸೋದ್ಯಮ ಇಲಾಖೆ ಕೂಡ ಪ್ರವಾಸಿಗರಿಗೆ ಮೂಲ ಸೌಕರ್ಯ ನೀಡುವತ್ತ ಹೆಚ್ಚಿನ ಗಮನಹರಿಸುತ್ತಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪಣಂಬೂರು ಬೀಚ್‌ನಲ್ಲಿ ಬೋಟಿಂಗ್ ಸ್ಟಾಪ್ ಸೇರಿದಂತೆ ಲೈಫ್ ಗಾರ್ಡ್‌ಗಳ ಸಂಖ್ಯೆಯನ್ನು ಕೂಡ 16ಕ್ಕೆ ಏರಿಕೆ ಮಾಡಲಾಗಿದೆ. ಜತೆಗೆ ಬೀಚ್ ಬದಿಗಳಲ್ಲಿ ನಾನಾ ರೀತಿಯ ತಿನಿಸುಗಳ ಅಂಗಡಿ ಕೂಡ ತಲೆಯೆತ್ತಿವೆ.
ಪಿಲಿಕುಳ ನಿಸರ್ಗಧಾಮ ವಿಕ್ಷಣೆಗೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ಹಿಂದೆ ಸುತ್ತಮುತ್ತಲ ಪ್ರದೇಶದ ನಿರ್ವಹಣೆಯ ಸಲುವಾಗಿ ಪ್ರತಿ ಸೋಮವಾರ ನಿಸರ್ಗಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶವಿರಲಿಲ್ಲ. ಆದರೆ, ಪ್ರವಾಸಿಗರ ಬೇಡಿಕೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ನಿಗದಿಯಾಗಿದ್ದ ರಜೆ ಕೂಡ ರದ್ದಾಗಿದೆ. ಇಲ್ಲಿಗೆ ದಿನಂಪ್ರತಿ ಎರಡು ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಾರದ ಏಳು ದಿನವೂ ಎಲ್ಲ ವಿಭಾಗಗಳು ಕೂಡ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತವೆ. ಸದ್ಯ ಇಲ್ಲಿ ಸಾವಿರದ ಇನ್ನೂರಕ್ಕೂ ಅಧಿಕ ವಿವಿಧ ಪ್ರಾಣಿಗಳಿವೆ. ಇನ್ನು ಕೆಲವು ದಿನಗಳಲ್ಲಿ ಹೊಸದಾಗಿ ಕಾಡು ಕೋಣ, ಕಾಡು ನಾಯಿ, ಕತ್ತೆ ಕಿರುಬಗಳನ್ನು ಕೂಡ ಕರೆತರಲಾಗುತ್ತದೆ.
Click this button or press Ctrl+G to toggle between Kannada and English