ಮಂಗಳೂರು: ಆಡ್ವಾಣಿಯವರ ಜನಚೇತನ ಯಾತ್ರೆಯ ಸಿದ್ಧತೆ ಕುರಿತಂತೆ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿವರಣೆ ನೀಡಿದರು. ಅಕ್ಟೋಬರ್ 31 ರಂದು ಜನಚೇತನ ಯಾತ್ರೆ ಮಂಗಳೂರು ನಗರಕ್ಕೆ ಬರಲಿದೆ. ನಗರದ ಕೇಂದ್ರ ಮೈದಾನಿನಲ್ಲಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು ಬಳಿಕ ಯಾತ್ರೆ ಉಡುಪಿಗೆ ತೆರಳಲಿದೆ. ಯಾತ್ರೆಯ ಕುರಿತಂತೆ 30 ವಿವಿಧ ವಿಭಾಗಗಳನ್ನು ರಚಿಸಲಾಗಿದ್ದು ಸಿದ್ದತೆಯಲ್ಲಿ ಕಾರ್ಯೊನ್ಮುಖವಾಗಿದೆ. ಯುವಮೋರ್ಚಾದಿಂದ ಯುವಜಾಗೃತಿ ರಥಯಾತ್ರೆ ನಡೆಯಲಿದ್ದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಬೆಳ್ತಂಗಡಿ ಹಾಗೂ ಬಂಟ್ವಾಳದಿಂದ ಕಾರ್ಯಕರ್ತರು ಪಾದಯಾತ್ರೆ ಮೂಲಕ ಸಮಾವೇಶಕ್ಕೆ ಆಗಮಿಸಲಿದ್ದಾರೆ . ಜಿಲ್ಲೆಯಲ್ಲಿ ಈಗಾಗಲೇ ಉತ್ಸಾಹದ ವಾತಾವರಣ ಮೂಡಿದೆ ಎಂದು ಅ ವರು ವಿವರಿಸಿದರು.
ರಾಜಕೀಯ ಜೀವನದಲ್ಲಿ ಸ್ವತ್ಛ , ಶುದ್ಧ ಚಾರಿತ್ರ್ಯವನ್ನು ಹೊಂದಿರುವ ಎಲ್. ಕೆ. ಆಡ್ವಾಣಿಯವರ 6ನೇ ರಥಯಾತ್ರೆ ಇದಾಗಿದೆ, ರಾಜಕೀಯ ಕ್ಷೇತ್ರದ ಮೂಲಕ ಉತ್ತಮ ಆಡಳಿತ, ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸು ತರುವ ನಿಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯದ ಒತ್ತಡ ನಿರ್ಮಾಣ ಹಾಗೂ ಭ್ರಷ್ಟಚಾರದ ವಿರುದ್ದ ಜಾಗೃತಿ ಉದ್ದೇಶದಿಂದ ಜನಚೇತನ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ರವಿ ವಿವರಿಸಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಅಶೋಕ್ ಅವರ ವಿರುದ್ದ ಮಾಡಿರುವ ಆರೋಪಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದ್ದು 5 ತಾರೀಕಿನೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಾಲಯ ತಿಳಿಸಿದೆ. ತನಿಖೆಯ ವರದಿ ಬರುವ ಮೊದಲೇ ಅಪರಾಧಿ ರೀತಿಯಲ್ಲಿ ನೋಡುವುದು ಸರಿಯಲ್ಲ. ಎಲ್.ಕೆ. ಆಡ್ವಾಣಿ ಅವರ ಸಭೆಯಲ್ಲಿ ಅಶೋಕ್ ಪಾಲ್ಗೊಳ್ಳುತ್ತಾರೆ ಎಂದರು.
ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ , ಪಕ್ಷದ ಮುಖಂಡರಾದ ಮೋನಪ್ಪ ಭಂಡಾರಿ, ದೇವದಾಸ ಶೆಟ್ಟಿ, , ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ| ಭರತ್ ಶೆಟ್ಟಿ ಅವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English