ಬೆಂಗಳೂರು: ವಿಧಾನಸಭೆಯಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪ್ ಗೌಡ ಗೈರಾದ ಹಿನ್ನೆಲೆಯಲ್ಲಿ ಮ್ಯಾಜಿಕ್ ಸಂಖ್ಯೆ 110ಕ್ಕೆ ಇಳಿದಿದೆ.
ಬಿಜೆಪಿ ಕಡೆಯಿಂದ ಎಲ್ಲಾ 104 ಸದಸ್ಯರಿದ್ದಾರೆ. ಕಾಂಗ್ರೆಸ್‌ನ 78 ಸದಸ್ಯರ ಪೈಕಿ 76 ಮಂದಿ ಉಪಸ್ಥಿತರಿದ್ದಾರೆ. ಜೆಡಿಎಸ್‌ನ 37 ಶಾಸಕರ ಪೈಕಿ 36 ಮಂದಿ ಇದ್ದಾರೆ. ಇವರ ಒಟ್ಟು ಸದಸ್ಯರ ಸಂಖ್ಯೆ 38 ಆಗಿದ್ದರೂ, ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಗೆದ್ದಿರುವ ಕಾರಣ ಇವರ ಶಾಸಕರ ಬಲ 37. ಇಂದು ಎಲ್ಲರೂ ಹಾಜರಾಗುತ್ತಿದ್ದು, ಹೆಚ್.ಡಿ. ರೇವಣ್ಣ ಮಾತ್ರ ಆಗಮಿಸಬೇಕಿದೆ. ಇವರು ಸದನದ ಹೊರಗಿದ್ದು, ಸಮಯ ನೋಡಿಕೊಂಡು ಒಳಗೆ ಬರಲಿದ್ದಾರೆ. ವಿಧಾನಸೌಧದ ಒಳಗೇ ಇರುವುದರಿಂದ ಯಾವುದೇ ಆತಂಕ ಜೆಡಿಎಸ್‌ಗೆ ಇಲ್ಲವಾಗಿದೆ.ಇನ್ನು ಪಕ್ಷೇತರರು ಇಬ್ಬರು ಸದನದಲ್ಲಿದ್ದಾರೆ.
ಒಟ್ಟು 224 ಸದಸ್ಯರ ವಿದಾನಸಭೆಯಲ್ಲಿ ಎರಡು ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಹೀಗಾಗಿ ನಡೆದ 222 ಕ್ಷೇತ್ರದ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರಲ್ಲಿ 220 ಮಂದಿ ಉಪಸ್ಥಿತರಿದ್ದಾರೆ. ಹೀಗಾಗಿ ಮ್ಯಾಜಿಕ್ ಸಂಖ್ಯೆ 110 ಆಗಿದೆ. ಬಿಜೆಪಿಗೆ 104 ಸದಸ್ಯರ ಬಲವಿದೆ. ಸ್ಪೀಕರ್ ಹೊರತುಪಡಿಸಿ ಇವರ ಬಳಿ ಸದ್ಯ 103 ಸದಸ್ಯರಿದ್ದಾರೆ. ಅಗತ್ಯ ಬಿದ್ದರೆ ಸ್ಪೀಕರ್ ಕೆ.ಜಿ.ಬೋಪಯ್ಯ ಮತದಾನ ಮಾಡಲಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಒಂದಾಗಿದ್ದು, ಇವರ ಬಲ ಸದ್ಯ 115 ಇದೆ. ಸದ್ಯದ ಸ್ಥಿತಿಯಲ್ಲಿ ವಿಶ್ವಾಸಮತ ಸಾಧಿಸಲು ಬಿಜೆಪಿಗೆ ಸ್ಪೀಕರ್ ಹೊರತುಪಡಿಸಿದರೆ ಒಟ್ಟು 7 ಸ್ಥಾನಗಳ ಕೊರತೆ ಇದೆ.
ವಿಧಾನಸಭೆಯ ಇಂದಿನ ಕಾರ್ಯಚಟುವಟಿಕೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ನಡೆಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
Click this button or press Ctrl+G to toggle between Kannada and English