ಮೈಸೂರು: ಕಾಲ ಚಿತ್ರಕ್ಕೂ ಕಾವೇರಿಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪ್ರಕಾಶ್ ರೈ ಮತ್ತೊಮ್ಮೆ ಕರ್ನಾಟಕ ಪಾಲಿಗೆ ಖಳ ನಾಯಕ ಎಂಬುದನ್ನ ಸಾಬೀತು ಮಾಡಿದ್ದಾರೆ. ಈ ನಟನಿಗೆ ಕಾಸು ಮಾತ್ರ ಮುಖ್ಯ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ರಜನಿಕಾಂತ್ ಅವರ ಕಾಲ ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧ ಮಾಡಿರುವುದಕ್ಕೆ ಚಿತ್ರಕ್ಕೂ ಕಾವೇರಿ ವಿಚಾರಕ್ಕೂ ಸಂಬಂಧವಿಲ್ಲ ಎಂದು ಪ್ರಕಾಶ್ ರೈ ಬರೆದುಕೊಂಡಿರುವ ಬಗ್ಗೆ ಇಂದು ಸಂಸದ ಪ್ರತಾಪ್ ಸಿಂಹ ಅವರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಬಗ್ಗೆ ಖಾರಾವಾಗಿಯೇ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್, ರಜನಿಕಾಂತ್ ಅವರನ್ನ ನಾವೆಲ್ಲರೂ ಇಷ್ಟಪಟ್ಟಿದ್ದೇವೆ. ಆದರೆ ಈ ಹಿಂದೆ ಕಾವೇರಿ ವಿಚಾರವಾಗಿ ಕೊಟ್ಟಂತಹ ಹೇಳಿಕೆ ಬಹಳ ನೋವನ್ನ ಕೊಟ್ಟದೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಸಹಜವಾಗಿ ಅವರ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿವೆ. ರಜನಿಕಾಂತ್ ಅವರಿಗೆ ರೈ ಸಲಹೆ ಕೊಡುವುದರ ಬದಲು ಕಾವೇರಿಗೂ ಕಾಲ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಕರ್ನಾಟಕದ ಪಾಲಿಗೆ ಖಳನಾಯಕ ಎಂಬುದನ್ನ ಸಾಬೀತು ಮಾಡಿದ್ದಾರೆಂದು ವಾಗ್ದಾಳಿ ನಡೆಸಿದರು.
ನಟ ಪ್ರಕಾಶ್ ರೈ ತೆರೆ ಮೇಲೆ ಮಾತ್ರ ಅಲ್ಲ ಸಾರ್ವಜನಿಕ ಜೀವನದಲ್ಲೂ ಖಳ ನಾಯಕನೆಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಕಾವೇರಿ ವಿಚಾರವಾಗಿ ರೈ ಮಾಡಿರುವ ಟ್ವೀಟ್ ಕರ್ನಾಟಕದ ಪಾಲಿಗೂ ಪ್ರಕಾಶ್ ರೈ ಒಬ್ಬ ಖಳ ನಟ ಎಂಬುದುನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರೈಗೆ ಭಾವನಾತ್ಮಕವಾದ ಸಂಬಂಧ ಇಲ್ಲದಿರಬಹುದು. ಅವರಿಗೆ ಕಾಸು ಮುಖ್ಯವಾಗಿದೆ. ಆದರೆ ನಮಗೆ ಕಾವೇರಿ ಮುಖ್ಯವಾಗಿದೆ. ಆತನಿಗೆ ಕಾಸು ಮುಖ್ಯವಾಗಿರುವುದರಿಂದ ಈ ರೀತಿಯ ಹೇಳಿಕೆಯನ್ನ ಕೊಟ್ಟಿದ್ದಾರೆ ಎಂದರು.
ನನ್ನನ್ನು ನಟನಾಗಿರಲು ಬಿಡಿ ಎಂದು ಹೇಳಿದ ವ್ಯಕ್ತಿ, ಕಾಂಗ್ರಸ್ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿದರು. ಆದರೆ ಚುನಾವಣೆಯಲ್ಲಿ ಫಲಿತಾಂಶ ಬಂದ ನಂತರ ಪರಾರಿಯಾಗಿದ್ದರು. ಇಂದು ಕಾವೇರಿ ವಿಚಾರವಾಗಿ ಮತ್ತೊಮ್ಮೆ ಖಳನ ಬುದ್ಧಿ ತೋರಿಸಿದ್ದಾರೆ. ಕಾವೇರಿ ಕರ್ನಾಟಕದ ಪಾಲಿಗೆ ಜೀವನಾಡಿ. ಕರ್ನಾಟಕಕ್ಕೆ ಅನ್ನ ನೀರನ್ನ ಕೊಡುತ್ತಿರುವುದು ಕಾವೇರಿ. ಕಾವೇರಿ ವಿಚಾರವಾಗಿ ರಜನಿಕಾಂತ್ ಅಲ್ಲ ಬೇರೆ ಯಾರೇ ಹೇಳಿಕೆ ಕೊಟ್ಟರೂ ನಾವು ಸಹಿಸಲ್ಲ. ಕಾವೇರಿಯನ್ನ ಕರ್ನಾಟಕದಿಂದ ಕಿತ್ತುಕೊಳ್ಳಲು ಪ್ರಯತ್ನಿಸಿದರೆ ತೀವ್ರವಾಗಿ ಖಂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
Click this button or press Ctrl+G to toggle between Kannada and English