ಹಿಂದು ವಿರೋಧಿ ಪಠ್ಯಪುಸ್ತಕವನ್ನು ಕೂಡಲೇ ಹಿಂಪಡೆಯಿರಿ: ಸಿ.ಟಿ. ರವಿ

11:25 AM, Tuesday, June 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

c-t-ravi-2ಮಂಗಳೂರು: ಹೊಸತಾಗಿ ರಚನೆಯಾದ ಶಾಲಾ ಪಠ್ಯ ಪುಸ್ತಕದಲ್ಲಿ ಏಸು ಕ್ರಿಸ್ತ ಮತ್ತು ಮಹಮ್ಮದ್ ಪೈಗಂಬರ್ ಬಗ್ಗೆ ಪಾಟ ಸೇರ್ಪಡೆ ಯಾಗಿರುವುದು ಕರಾವಳಿಯಲ್ಲಿ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಮೊದಲ ಪಾಠವೇ ಕ್ರಿಶ್ಚಿಯನ್ ಮತದ ಉಗಮ, ಕೊಡುಗೆಗಳ ಬಗೆಗಿದೆ. ಅಲ್ಲದೆ, ಮತ್ತೊಂದು ಪಾಠದಲ್ಲಿ ಏಸು ಕ್ರಿಸ್ತನ ಜೀವನ ಚರಿತ್ರೆಯನ್ನೂ ಹೇಳಲಾಗಿದ್ದು, ಚರ್ಚ್ ಮತ್ತು ಕ್ರಿಸ್ತ ಮತದ ಬಗ್ಗೆ ತಿಳಿದುಕೊಳ್ಳಲು ಹತ್ತಿರದ ಚರ್ಚ್ ಗೆ ತೆರಳುವಂತೆ ಮಕ್ಕಳಿಗೆ ಸೂಚಿಸಲಾಗಿದೆ.

ಪುಸ್ತಕದ ಇನ್ನೊಂದು ಪಠ್ಯದಲ್ಲಿ ಇಸ್ಲಾಮ್ ಮತ್ತು ಪೈಗಂಬರ್ ಜೀವನ, ಬೋಧನೆ ಬಗ್ಗೆ ಹೇಳಲಾಗಿದೆ. ಆದರೆ, ಹಿಂದು ಧರ್ಮದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಈ ಎರಡು ಪಠ್ಯಗಳನ್ನು ಈ ಬಾರಿಯ ಶಾಲಾ ಪಠ್ಯ ಪುಸ್ತಕದಲ್ಲಿ ಹೊಸತಾಗಿ ಸೇರಿಸಿದ್ದು ವಿರೋಧಕ್ಕೆ ಕಾರಣವಾಗಿದೆ. ಈ ಪಠ್ಯಗಳು ಜಾತ್ಯತೀತ ಅನ್ನುವುದಾದರೆ ಹಿಂದೂ ದೇವರಾದ ರಾಮ, ಕೃಷ್ಣರ ಬಗ್ಗೆಯೂ ಪಠ್ಯಗಳಿರಬೇಕಿತ್ತು.

ಶೇಕಡಾ 80 ರಷ್ಟಿರುವ ಹಿಂದುಗಳನ್ನು ಅವಮಾನಿಸಿ, ಇಂಥ ಪಠ್ಯವನ್ನುಸೇರಿಸಲಾಗಿದೆ. ಕೂಡಲೇ ಈ ಪುಸ್ತಕವನ್ನು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ ಶೇಣವ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಈ ವಿವಾದಿತ ಪುಸ್ತಕದ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಏಸು, ಪೈಗಂಬರ್ ಬಗ್ಗೆ ಪಠ್ಯ ಸೇರಿಸಲಾಗಿದೆ.

ಧರ್ಮ ಬೋಧನೆ ಮಾಡುವ ಪಠ್ಯಪುಸ್ತಕದ ಉದ್ದೇಶವೇನು?” ಎಂದು ಅವರು ಪ್ರಶ್ನಿಸಿದ್ದಾರೆ. “ಕ್ರಿಶ್ಚಿಯನ್, ಇಸ್ಲಾಂ ಬೋಧನೆಯಷ್ಟೇ ಜಾತ್ಯತೀತವೇ ?” ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪಠ್ಯ ರಚಿಸಿದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಈ ಬಗ್ಗೆ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು. “ಹಿಂದೂ ಸಾಧು, ಸಂತರ ಬಗ್ಗೆ ಪಠ್ಯದಲ್ಲಿ ಯಾಕೆ ಹೇಳುತ್ತಿಲ್ಲ? ಇಂಥ ಹಿಂದು ವಿರೋಧಿ ಪಠ್ಯಪುಸ್ತಕವನ್ನು ಕೂಡಲೇ ಹಿಂಪಡೆಯಬೇಕು,” ಎಂದು ಅವರು ಒತ್ತಾಯಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English