ಮಂಗಳೂರು: ಯುವ ಬ್ರಿಗೇಡ್ ಕಾರ್ಯಕರ್ತರು ದಕ್ಷಿಣಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿಯ ಸ್ವಚ್ಚತಾ ಕಾರ್ಯಕ್ರಮವನ್ನು ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನಡೆಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಪಾಪ ಕಳೆಯುವ ನಂಜನಗೂಡಿನ ಕಪಿಲ ನದಿಯೇ ಕಲ್ಮಶ! ಭಾನುವಾರ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ರಾಜ್ಯದೆಲ್ಲೆಡೆಯಿಂದ ಬಂದ 500ಕ್ಕೂ ಮಿಕ್ಕಿ ಕಾರ್ಯಕರ್ತರು ನದಿಯ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಸ್ವಚ್ಚ ನೇತ್ರಾವತಿ ಧರ್ಮಸ್ಥಳಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರು ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಸ್ನಾನ ಮಾಡಿ ನೇತ್ರಾವತಿ ನದಿಗೆ ತ್ಯಾಜ್ಯಗಳನ್ನು ಹಾಕುತ್ತಿದ್ದರು. ಭಕ್ತಾಧಿಗಳು ಎಸೆದ ದೇವರ ಫೋಟೋಗಳನ್ನು, ತೆಂಗಿನ ಕಾಯಿ, ಸ್ನಾನ ಮಾಡಿ ಬಿಸಾಡಿದ ಬಟ್ಟೆಗಳು, ಸಾಬೂನು, ಕನ್ನಡಿ, ಬಾಚಣಿಕೆ, ಟೂತ್ ಬ್ರಶ್, ಚಪ್ಪಲಿಗಳು, ಮಕ್ಕಳ ಆಟಿಕೆಗಳು ಇತ್ಯಾದಿ ವಸ್ತುಗಳನ್ನು ನೇತ್ರಾವತಿ ಸ್ಚಚ್ಚತಾ ಕಾರ್ಯ ಮಾಡಿದ ಕಾರ್ಯಕರ್ತರು ನದಿಯಿಂದ ಹೊರ ತೆಗೆದು ಸ್ವಚ್ಚಗೊಳಿಸಿದ್ದಾರೆ.
ನೇತ್ರಾವತಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಸಂಪೂರ್ಣ ಸಹಕಾರ ನೀಡಿದ್ದರು. ನೇತ್ರಾವತಿ ಸ್ವಚ್ಚತಾ ಕಾರ್ಯ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಅವರು ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುಪ್ರಿಯ ಹರ್ಷೇಂದ್ರ ಕುಮಾರ್ ಜತೆಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿರೇಂದ್ರ ಹೆಗ್ಗಡೆ ಅವರು ಸರ್ಕಾರವೇ ನದಿಗಳಿಗೆ ತ್ಯಾಜ್ಯ ಹಾಕಬಾರದು ಎಂದು ಕಡ್ಡಾಯ ಕಾನೂನು ಜಾರಿ ಮಾಡಬೇಕು ಎಂದು ಹೇಳಿದರು. ಸ್ನಾನ ಮಾಡಿ ನದಿ ನೀರಿನಲ್ಲೆ ಬಟ್ಟೆ ಒಗೆಯುವುದರಿಂದ, ತ್ಯಾಜ್ಯಗಳನ್ನು ಹಾಕುವುದರಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗುವುದಲ್ಲದೆ ಅನಾರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ತೀರ್ಥಕ್ಷೇತ್ರದಲ್ಲಿರುವ ನದಿಗಳಲ್ಲಿ ಬಟ್ಟೆ ಒಗೆಯದಂತೆ ಸರ್ಕಾರವೇ ಕಡ್ಡಾಯ ಕಾನೂನು ಜಾರಿ ಮಾಡಿದರೆ ಮಾತ್ರ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಯುವ ಬ್ರಿಗೇಡ್ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದ ಡಾ.ಹೆಗ್ಗಡೆಯವರು, ಭಕ್ತರು ಕೂಡ ಮೂಢನಂಬಿಕೆಗೆ ಒಳಗಾಗದೆ ಎಚ್ಚರಿಕೆ ಮತ್ತು ಹೊಣೆಗಾರಿಕೆಯಿಂದ ನದಿಯ ಪಾವಿತ್ರ್ಯ ಕಾಪಾಡಬೇಕು. ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕರು ಕೂಡಾ ಸ್ವಚ್ಛತೆ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಮಾತವಾಡಿದ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್ ನಿಂದ ಈಗಾಗಲೇ 120ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛತೆ ಮಾಡಿದ್ದೇವೆ.
ಕಟೀಲಿನ ನಂದಿನಿ, ಕೊಲ್ಲೂರಿನ ಸೌಪರ್ಣಿಕಾ, ನಂಜನಗೂಡಿನ ಕಪಿಲಾ ಹಾಗೂ ಕಾವೇರಿ ನದಿಯನ್ನು ಸ್ವಚ್ಛ ಮಾಡಿದ ನಂತರ ನೇತ್ರಾವತಿ ನದಿಯನ್ನು ಸ್ವಚ್ಛತೆ ಕೆಲಸವನ್ನು ಮಾಡಿದ್ದೇವೆ.
ನದಿಯ ಒಳಗಡೆ ಯಾತ್ರಾರ್ಥಿಗಳು ಬಟ್ಟೆಬರೆಗಳನ್ನು, ದೇವರ ಫೋಟೋಗಳನ್ನು ಹಾಕಿ ಕೊಳಕು ಮಾಡಿದ್ದಾರೆ. ಅದನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡಿದ್ದೇವೆ ಎಂದರು. ಶ್ರೀ ಕ್ಷೇತ್ರದ ವತಿಯಿಂದ ಸ್ಚಚ್ಚತಾ ಕಾರ್ಯಕ್ಕೆ ಸಂಪೂರ್ಣ ಸಹಕಾರ ಹಾಗೂ ಕಾರ್ಯಕರ್ತರಿಗೆಲ್ಲ ಊಟ, ವಸತಿ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
Click this button or press Ctrl+G to toggle between Kannada and English