ಮಂಗಳೂರು: ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ಸ್ಥಾನಗಳ ಹಂಚಿಕೆ ಬಗ್ಗೆ ಕುತೂಹಲ ಮೂಡಿರುವ ನಡುವೆಯೇ ಮಂಗಳೂರು ಶಾಸಕ ಯು.ಟಿ.ಖಾದರ್ ಅವರಿಗೆ ಸಚಿವ ಸ್ಥಾನ ಖಚಿತಗೊಂಡಿದೆ ಎನ್ನಲಾಗಿದೆ.
ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಚಿವ ಸಂಪುಟ ರಚನೆ ತೀವ್ರ ಕುತೂಹಲ ಸೃಷ್ಟಿಸಿತ್ತು. ಈ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿದ್ದ ಹಲವು ಘಟಾನುಘಟಿಗಳು ಸಚಿವ ಸ್ಥಾನದಿಂದ ವಂಚಿತರಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಯು.ಟಿ. ಖಾದರ್ ರಿಗೆ ಸಚಿವ ಸ್ಥಾನ ಈ ಬಾರಿ ಸಿಗುವುದು ಸುಲಭದ ಮಾತಲ್ಲ ಎಂದು ಹೇಳಲಾಗಿತ್ತು. ಆದರೆ ಈ ಎಲ್ಲಾ ವದಂತಿಗಳು ಇದೀಗ ಸುಳ್ಳಾಗಿದ್ದು, ಯು.ಟಿ.ಖಾದರ್ ರಿಗೆ ಸಚಿವ ಸ್ಥಾನ ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಜಯ ಗಳಿಸಿದ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ ಸಚಿವ ಯು.ಟಿ. ಖಾದರ್. ಕಳೆದ ಬಾರಿ ಆರೋಗ್ಯ ಹಾಗು ಆಹಾರ, ನಾಗರಿಕ ಸರಬರಾಜು ಸಚಿವರಾಗಿದ್ದ ಅವಧಿಯಲ್ಲೂ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದ ಹೆಗ್ಗಳಿಕೆಯೂ ಖಾದರ್ ಅವರಿಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಚಿವ ಖಾದರ್ ಅವರಿಗೆ ನೀಡಲಾಗುವ ಖಾತೆ ಯಾವುದು ಎಂದು ಇನ್ನೂ ಸ್ಪಷ್ಟಗೊಂಡಿಲ್ಲವಾದರೂ, ಕಳೆದ ಬಾರಿಯಂತೆ ಮಹತ್ವದ ಸಚಿವ ಸ್ಥಾನ ಅವರಿಗೆ ಸಿಗಲಿದೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English