ಮಂಗಳೂರು: ಕರಾವಳಿಯಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಜಂಪಿಂಗ್ ಚಿಕನ್ ಗಾಗಿ ಬೇಟೆ ಆರಂಭವಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಗಿಡಗಂಟಿಗಳಲ್ಲಿ, ಕೆರೆ, ತೊರೆ, ನಾಲೆ, ಕಾಲುವೆ, ಸೇರಿದಂತೆ ಕಾಡಿನಂಚಿನಲ್ಲಿ ಒಟರಗುಟ್ಟುವ ಈ ಜಂಪಿಂಗ್ ಚಿಕನ್ ಗೆ ಗೋವಾದ ರೆಸ್ಟೋರೆಂಟ್ ಗಳಲ್ಲಿ ಭಾರೀ ಬೇಡಿಕೆ ಇದೆ. ಜಂಪಿಂಗ್ ಚಿಕನ್ ಅಂದ ಕೂಡಲೇ ಇದಾವ ಚಿಕನ್ ಎಂದು ಗೊಂದಲ ಬೇಡ .
ಇಲ್ಲಿ ಜಂಪಿಂಗ್ ಚಿಕನ್ ಅಂದರ್ ಬೃಹತ್ ಗಾತ್ರದ ಕಪ್ಪೆಗಳು.ಕರಾವಳಿಯಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ನೆರೆಯ ರಾಜ್ಯ ಗೋವಾದ ರೆಸ್ಟೋರೆಂಟ್ ಗಳಲ್ಲಿ ಕಪ್ಪೆ ಖಾದ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಗೋವಾದ ಪ್ರತಿಷ್ಠಿತ ಹೊಟೇಲ್ ಗಳಲ್ಲಿ ಕಪ್ಪೆ ಮಾಂಸಕ್ಕೆ ಜಂಪಿಂಗ್ ಚಿಕನ್ ಎಂದೇ ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕಪ್ಪೆಗಳ ಪೂರೈಕೆಗೆ ಗೋವಾದ ಪ್ರತಿಷ್ಠಿತ ರೆಸ್ಟೋರೆಂಟ್ ಗಳು ಉತ್ತರ ಕನ್ನಡ ಸೇರಿದಂತೆ ಕರಾವಳಿಯ ಜಿಲ್ಲೆಗಳತ್ತ ಮುಖ ಮಾಡುತ್ತವೆ. ದೊಡ್ಡ ಗಾತ್ರದ ಕಪ್ಪೆಗಳಿಗೆ ಗೋವಾದಲ್ಲಿ ಭಾರೀ ಬೇಡಿಕೆ ಇದೆ.
ಆದರೆ ಗೋವಾದಲ್ಲಿ ಕಪ್ಪೆ ಬೇಟೆಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಪ್ಪೆ ಪೂರೈಕೆಗೆ ಗೋವಾದ ರೆಸ್ಟೋರೆಂಟ್ ಗಳು ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಇತರ ತಾಲೂಕುಗಳನ್ನು ಅವಲಂಬಿಸುತ್ತವೆ. ಹಿಡಿದ ಕಪ್ಪೆಗಳನ್ನು ಗೋವಾದ ಮಧ್ಯವರ್ತಿಗಳೇ ಬಂದು ಕೊಂಡೊಯ್ಯತ್ತಾರೆ. ಕೆಲವು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಧಂದೆಗೆ ಕಡಿವಾಣ ಹಾಕಲಾಗಿತ್ತು. ಅದರೆ ಇತ್ತೀಚೆಗೆ ಈ ಕಳ್ಳ ದಂಧೆ ಮತ್ತೆ ಆರಂಭವಾಗಿದೆ. ಕಾರವಾರ ಸೇರಿದಂತೆ ಇತರ ಕಡೆಗಳಿಂದ ಕಳ್ಳ ಮಾರ್ಗಗಾಗಿ ಈ ಕಪ್ಪೆಗಳು ಗೋವಾ ಸೇರುತ್ತಿವೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿ ಜಿಲ್ಲೆಗಳಲ್ಲಿ ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಕಪ್ಪೆಗಳನ್ನು ಹಿಡಿದು ಸಾಗಿಸುವ ವ್ಯವಸ್ಥಿತ ಜಾಲಗಳು ಕಾರ್ಯಾಚರಣೆ ಆರಂಭಿಸುತ್ತವೆ. ಕತ್ತಲಾಗುತ್ತಿದ್ದಂತೆ ಟಾರ್ಚ್ಗಳನ್ನು ಹಿಡಿಡು ಈ ತಂಡಗಳು ಕಪ್ಪೆಗಳ ಬೇಟೆಗೆ ಇಳಿಯುತ್ತವೆ. ದೊಡ್ಡಗಾತ್ರದ ಕಪ್ಪೆಗಳನ್ನು ಹಿಡಿಯುವ ಈ ತಂಡ ಗೋವಾದ ರೆಸ್ಟೋರಂಟ್ ಗಳಿಗೆ ರವಾನಿಸುತ್ತವೆ . ವಿದೇಶಿಯರಿಗೆ ಭಾರೀ ಪ್ರೀಯವಾಗಿರುವ ಈ ಕಪ್ಪೆಗಳನ್ನು ಈ ರೆಸ್ಟೋರಂಟ್ ಗಳು ಹಚ್ಚಿನ ಹಣ ನೀಡಿ ಖರೀದಿಸುತ್ತಿವೆ.
ಒಂದು ದೊಡ್ಡಗಾತ್ರದ ಕಪ್ಪೆಗೆ 300 ರಿಂದ 450 ರೂಪಾಯಿ ನೀಡಿ ಖರೀದಿಸಲಾಗುತ್ತದೆ. ಕಪ್ಪೆಗಳ ಗಾತ್ರಗಳಿಗೆ ತಕ್ಕಂತೆ ಬೆಲೆ ನಿಗದಿಯಾಗುತ್ತದೆ . ಗೋವಾದ ರೆಸ್ಟೋರೆಂಟ್‌ಗಳಲ್ಲಿ ವಿದೇಶಿಯರಿಗೆ ಪ್ರಿಯವಾದ ಆಹಾರ ಇದಾಗಿದ್ದರಿಂದ ಕಪ್ಪೆಯ ಮಾಂಸದಿಂದ ಮಾಡಲಾಗುವ ಖಾದ್ಯಗಳನ್ನು ಹೋಟೇಲ್ ಉದ್ಯಮಿಗಳಿಗೆ ಲಾಭ ತಂದುಕೊಡುತ್ತಿವೆ. ಕಪ್ಪೆ ಖರೀದಿ ಮಾಡುವವರು ಹೆಚ್ಚು ಹಣದ ಆಮಿಷ ನೀಡುವುದರಿಂದ ಮಳೆಗಾಲದಲ್ಲಿ ಕಪ್ಪೆಗಳನ್ನು ಹಿಡಿಯುವ ಜಾಲ ಹೆಚ್ಚುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಕಾರಣದಿಂದಾಗಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಪ್ಪೆ ಹಿಡಿಯುವುದು ಹೆಚ್ಚುತ್ತಿದೆ ಎಂದು ಹೇಳಲಾಗಿದೆ. ಕಳೆದ ಕೆಲ ವರ್ಷದ ಹಿಂದೆ ಗೋವಾದಲ್ಲಿ ಕಪ್ಪೆ ಹಿಡಿಯುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗೋವಾದಲ್ಲಿ ಕಠಿಣ ಕಾನೂನು ಇದ್ದರಿಂದ ಸ್ಥಳೀಯರು ಕಪ್ಪೆ ಹಿಡಿಯುವ ಅಕ್ರಮ ವ್ಯವಹಾರಕ್ಕೆ ಕೈಹಾಕುತ್ತಿಲ್ಲ. ಆದರೆ ಕರ್ನಾಟಕದ ಗಡಿ ಜಿಲ್ಲೆಗಳಾದ ಉತ್ತರ ಕನ್ನಡ ಹಾಗೂ ಬೆಳಗಾವಿ ಸೇರಿದಂತೆ ಇತರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಪ್ಪೆಗಳ ಸಾಗಾಟ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ವನ್ಯ ಜೀವಿ ಕಾಯ್ದೆಯಡಿ ಯಾವುದೇ ಕಪ್ಪೆಗಳನ್ನು ಹಿಡಿಯುವುದು, ಹಿಡಿದು ಸಾಗಾಟ ಮಾಡುವುದು ಕಾನೂನು ಬಾಹಿರ . ಕಪ್ಪೆ ಸಂರಕ್ಷಣೆಗೆ ಕಾನೂನು ಇದೆ. ಆದರೆ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ರೈತನ ಮಿತ್ರ ಎಂದೇ ಹೇಳಲಾಗುವ ಈ ಕಪ್ಪೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕಿದೆ.
Click this button or press Ctrl+G to toggle between Kannada and English