ಮಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇಗುಲ ದರ್ಶನ ಮಾಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿದ್ದು ಸಿಎಂ ದೇಗುಲ ದರ್ಶನಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ.
ನಿನ್ನೆ ಮತ್ತು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ವಿಶೇಷ ಪೂಜೆಗೆ ತೆರಳಿದ ಮುಖ್ಯಮಂತ್ರಿ ಕುಟುಂಬಕ್ಕೆ ಭಾರಿ ಮಳೆ ಸಾಕಷ್ಟು ಅಡ್ಡಿಗಳನ್ನು ತಂದಿದೆ.
ಮಾಜಿ ಪ್ರಧಾನಿ ದೇವೆಗೌಡ, ತಾಯಿ ಚೆನ್ನಮ್ಮ, ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಮುಖ್ಯಮಂತ್ರಿ ಕುಮಾರಸ್ವಾಮಿ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಅವರು ಧರ್ಮಸ್ಥಳಕ್ಕೆ ಹುಟ್ಟೂರು ಹಾಸನ ಜಿಲ್ಲೆಯಿಂದ ಶಿರಾಡಿ ಮಾರ್ಗವಾಗಿ ಸಂಜೆ 4 ಗಂಟೆಗೆ ಬರಬೇಕಿತ್ತು. ಆದರೆ ಶಿರಾಡಿ ಘಾಟ್ನಲ್ಲಿ ಗುಡ್ಡ ಕುಸಿದ ಕಾರಣ ಚಾರ್ಮಾಡಿಘಾಟಿಯಾಗಿ ಅವರು ಧರ್ಮಸ್ಥಳ ತಲುಪಬೇಕಾಯಿತು. ಹೀಗಾಗಿ ನಾಲ್ಕು ಗಂಟೆಗೆ ತಲುಪಬೇಕಾಗಿದ್ದ ಮುಖ್ಯಮಂತ್ರಿ ಕುಟುಂಬ ಧರ್ಮಸ್ಥಳದಲ್ಲಿ ದೇವಾಲಯ ದರ್ಶನ ಮಾಡಿದ್ದು ರಾತ್ರಿ 9 ಗಂಟೆಗೆ.
ನಿಗದಿತ ಸಮಯದಲ್ಲಿ ಅವರು ಧರ್ಮಸ್ಥಳ ತಲುಪದ ಹಿನ್ನೆಲೆಯಲ್ಲಿ ಅವರು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮಾಡಬೇಕಾದ ವಾಸ್ತವ್ಯ ಬದಲಿಸಿ ಧರ್ಮಸ್ಥಳದಲ್ಲಿಯೆ ವಾಸ್ತವ್ಯ ಹೂಡಿದ್ದರು.
ಬೆಳಗ್ಗೆ ಕುಕ್ಕೆಸುಬ್ರಹ್ಮಣ್ಯದಲ್ಲಿ ಆಶ್ಲೇಷಾ ಪೂಜೆ, ತುಲಾಭಾರ ಸೇವೆಯಲ್ಲಿ ಸಿಎಂ ಭಾಗವಹಿಸಬೇಕಿತ್ತು. ಆದರೆ ಬೆಳಗ್ಗೆ ಧರ್ಮಸ್ಥಳದಿಂದ ಗುಂಡ್ಯವಾಗಿ ಬರಬೇಕಿತ್ತು. ಆದರೆ ಗುಂಡ್ಯ ಮಾರ್ಗದಲ್ಲಿ ಮಳೆಯ ಕಾರಣ ರಸ್ತೆಯಲ್ಲಿ ನೆರೆ ಬಂದ ಕಾರಣ ದಾರಿ ಬದಲಿಸಿ ಜಾಲ್ಸೂರು ಮಾರ್ಗವಾಗಿ ಬರಬೇಕಾಯಿತು.
ಸುಬ್ರಹ್ಮಣ್ಯದಲ್ಲಿ ಪೂಜೆ ಮುಗಿಸಿ ಸುಳ್ಯ ಮಾರ್ಗವಾಗಿ ಮಡಿಕೇರಿ ಮೂಲಕ ಬೆಂಗಳೂರು ತಲುಪಬೇಕಿತ್ತು. ಆದರೆ ಮಡಿಕೇರಿ ಮಾರ್ಗದಲ್ಲಿ ಗುಡ್ಡ ಕುಸಿದು ಆ ರಸ್ತೆಯ ಬದಲಿಗೆ ಶಿರಾಡಿ ಘಾಟ್ ಮೂಲಕ ಬೆಂಗಳೂರು ತೆರಳಲಿದ್ದಾರೆ.
ಒಟ್ಟಿನಲ್ಲಿ ಮುಖ್ಯಮಂತ್ರಿಗಳ ಕುಟುಂಬ ನಡೆಸಿದ ದೇವಾಲಯ ದರ್ಶನದಲ್ಲಿ ಮಳೆರಾಯನ ಅಡ್ಡಿಯಿಂದ ಸಾಕಷ್ಟು ವಿಳಂಬವಾಗಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
Click this button or press Ctrl+G to toggle between Kannada and English