ಭಾರತದ ತೇಜೋಮಯ ಇತಿಹಾಸವನ್ನು ನೆನೆಯುವ ದಿನವೇ ಸ್ವಾತಂತ್ರ್ಯ ದಿನಾಚರಣೆ

12:15 PM, Tuesday, August 14th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

 

shivajiಮಂಗಳೂರು: 15 ಆಗಸ್ಟ್ 1947 ರಂದು ಭಾರತವು ಸ್ವತಂತ್ರವಾಯಿತು. ನಮ್ಮ ಸ್ವಾತಂತ್ರ್ಯ ಸೈನಿಕರು ಆಂಗ್ಲರ 150 ವರ್ಷಗಳ ದಾಸ್ಯತ್ವದಿಂದ ನಮ್ಮ ದೇಶವನ್ನು ಬಿಡಿಸಿದರು. ಆ ನೆನಪಿಗಾಗಿ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ.

ಭಾರತವು ಸ್ವತಂತ್ರವಾಗುವ ಮೊದಲು ಮೊಗಲರು, ಪೋರ್ಚುಗೀಸರು, ಆದಿಲಶಾಹ, ಕುತುಬಶಾಹ ಮತ್ತು ಆಂಗ್ಲರಂತಹ ಅನೇಕರು ಭಾರತವನ್ನು ಆಳಿದರು. ಇವರೆಲ್ಲರೂ ಭಾರತದಲ್ಲಿದ್ದ ಸ್ವಾರ್ಥಿ ಮತ್ತು ಭ್ರಷ್ಟ ಜನರನ್ನು ತಮ್ಮ ಪಕ್ಷದಲ್ಲಿ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸೈನಿಕರ ಮೇಲೆ ದೌರ್ಜನ್ಯ ನಡೆಸಿ ರಾಜ್ಯವಾಳಿದರು. ವ್ಯಾಪಾರ ಮಾಡುವ ನಿಮಿತ್ತ ಆಂಗ್ಲರು ಭಾರತಕ್ಕೆ ಬಂದರು. ಹೀಗೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಆಂಗ್ಲರು ಲಕಗಟ್ಟಲೆ ಜನರಿದ್ದ ನಮ್ಮ ದೇಶವನ್ನು 150 ವರ್ಷಗಳ ಕಾಲ ಆಳಿದರು.

ನಮ್ಮಲ್ಲಿ ಐಕ್ಯವಿಲ್ಲದ ಕಾರಣ ಇಷ್ಟು ಕಡಿಮೆ ಸಂಖ್ಯೆಯಲ್ಲಿದ್ದ ಪರಕೀಯರು ನಮ್ಮನ್ನು ಆಳಲು ಸಾಧ್ಯವಾಯಿತು. ‘ನಮ್ಮನ್ನು ಪರಕೀಯರು ಆಳುತ್ತಿದ್ದಾರೆ; ಅವರು ಕ್ರೂರಿಗಳಾಗಿದ್ದಾರೆ’ ಎನ್ನುವುದು ನಮ್ಮ ಗಮನಕ್ಕೆ ಬಂದಿದ್ದರೂ ರಾಷ್ಟ್ರಪ್ರೇಮದ ಅಭಾವದಿಂದಾಗಿ, ನಮ್ಮಲ್ಲಿ ಒಗ್ಗಟ್ಟಿಲ್ಲದೇ ಇದ್ದುದರಿಂದ ಪರಕೀಯರು ನಮ್ಮ ಮೇಲೆ ರಾಜ್ಯವಾಳಲು ಸಾಧ್ಯವಾಯಿತು. ಭಾರತದ ಜನರಿಗೆ ಸ್ವರಾಜ್ಯದ ಬಗ್ಗೆ ಅಭಿಮಾನವಿಲ್ಲ, ರಾಷ್ಟ್ರಪ್ರೇಮ, ಸ್ವರಾಜ್ಯದ ಕುರಿತು ಆದರ, ಒಗ್ಗಟ್ಟು ಮುಂತಾದ ಗುಣಗಳು ನಮ್ಮಲ್ಲಿ ಇಲ್ಲದಿದ್ದುದರಿಂದ ಅಥವಾ ಯೋಗ್ಯ ಸಮಯದಲ್ಲಿ ಈ ಗುಣಗಳನ್ನು ನಾವು ಉಪಯೋಗಿಸದೇ ಇದ್ದುದರಿಂದ ನಾವು ಪಾರತಂತ್ರದಲ್ಲಿರಬೇಕಾಯಿತು.

ಭಾರತದ ಇತಿಹಾಸವನ್ನು ನೋಡಿದರೆ, ಅದು ಅತ್ಯಂತ ಉಜ್ವಲವಾಗಿದೆ. ಅದರಿಂದ ನಾವು ಬಹಳಷ್ಟು ಕಲಿಯಬಹುದು. ಇದಕ್ಕಾಗಿ ಶಿವಾಜಿ ಮಹಾರಾಜರ ಉದಾಹರಣೆಯು ಅತ್ಯಂತ ಆದರ್ಶಪ್ರಾಯವಾಗಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅವರು ಬೆರಳೆಣಿಕೆಯಷ್ಟು ಮಾವಳಾರನ್ನು ಒಟ್ಟುಗೂಡಿಸಿ ರೋಹಿಡೇಶ್ವರನ ಸನ್ನಿಧಾನದಲ್ಲಿ ಸ್ವರಾಜ್ಯ ಸ್ಥಾಪನೆಯ ಪ್ರತಿಜ್ಞೆಯನ್ನು ಮಾಡಿದ್ದರು. ಅನಂತರ ಒಬ್ಬೊಬ್ಬ ಮಾವಳ (ಧರ್ಮಯೋಧ)ರನ್ನು ಸಜ್ಜುಗೊಳಿಸಿ, ಅವರಿಂದ ಭವಾನಿ ದೇವಿಯ ಉಪಾಸನೆ ಮಾಡಿಸಿಕೊಂಡರು. ಅವರು ಸಮರ್ಥ ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ರಾಜ್ಯವನ್ನು ಸ್ಥಾಪಿಸುವಾಗ, ಇದು ‘ಶ್ರೀಗಳ ರಾಜ್ಯವಾಗಿದೆ’ ಎಂಬ ಒಂದೇ ವಿಚಾರವನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಂಡು ಸ್ಥಾಪಿಸಿದರು.

ಎರಡನೆಯ ಉದಾಹರಣೆಯೆಂದರೆ, ಲೋಕಮಾನ್ಯ ತಿಲಕರು. ಭಾರತವು ಪಾರತಂತ್ರ್ಯದಲ್ಲಿದ್ದಾಗ ‘ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ನಾನು ಪಡೆದೇ ತೀರುತ್ತೇನೆ’ ಎಂದು ಗರ್ಜಿಸಿ, ಭಾರತೀಯರನ್ನು ಜಾಗೃತಗೊಳಿಸಿದ್ದರು. ಅನಂತರ ಸ್ವಾತಂತ್ರ್ಯವೀರ ಸಾವರಕರ, ವಲ್ಲಭಭಾಯಿ ಪಟೇಲ ಮತ್ತು ಇನ್ನಿತರ ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಸೈನಿಕರಿಂದಾಗಿ ಭಾರತವು ತಂತ್ರವಾಯಿತು.

ಆಗಸ್ಟ್ 15 ಮತ್ತು ಜನವರಿ 26 ಈ ರಾಷ್ಟ್ರೀಯ ದಿನಗಳಂದು ಚಿಕ್ಕ ಆಕಾರದ ಕಾಗದದ ರಾಷ್ಟ್ರ ಧ್ವಜಗಳನ್ನು ವ್ಯಾಪಕ ಸ್ತರದಲ್ಲಿ ಮಾರಾಟ ಮಾಡುತ್ತಾರೆ. ಚಿಕ್ಕ ಮಕ್ಕಳ ಸಹಿತ ಅನೇಕ ಜನರು ರಾಷ್ಟ್ರಭಕ್ತಿ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಲು ಈ ರಾಷ್ಟ್ರಧ್ವಜಗಳನ್ನು ಖರೀದಿಸುತ್ತಾರೆ ಮತ್ತು ಅವುಗಳನ್ನು ಹೇಗೇಗೋ ಇಡುತ್ತಾರೆ. ಕೆಲವು ದಿನಗಳ ನಂತರ ಇದೇ ಧ್ವಜಗಳನ್ನು ಹರಿದು ರಸ್ತೆಯ ಮೇಲೆ, ಕಸದ ತೊಟ್ಟಿಯಲ್ಲಿ ಮತ್ತು ಇತರ ಕಡೆಗಳಲ್ಲಿ ಬಿಸಾಡುತ್ತಾರೆ. ಹೀಗೆ ಮಾಡಿ ನಾವು ರಾಷ್ಟ್ರಧ್ವಜವನ್ನು ಅಂದರೆ ರಾಷ್ಟ್ರವನ್ನೇ ಅವಮಾನ ಮಾಡುತ್ತೇವೆ. ನೀವು ಇಂತಹ ಅಯೋಗ್ಯ ಕೃತಿಯನ್ನು ಮಾಡುವಿರೇನು ?

ನಾವೇ ನಮ್ಮ ಧ್ವಜದ ಗೌರವವನ್ನು ಕಾಪಾಡಬೇಕು. ಇತರ ಯಾರಾದರೂ ಧ್ವಜದ ಅಪಮಾನ ಮಾಡುತ್ತಿದ್ದಲ್ಲಿ ಅವರಿಗೆಲ್ಲ ನಾವು ತಿಳಿಸಿ ಹೇಳೋಣ ಮತ್ತು ನಮ್ಮ ರಾಷ್ಟ್ರೀಯ ಕರ್ತವ್ಯವನ್ನು ನಿಭಾಯಿಸೋಣ. ಆಗಸ್ಟ್ 15 ಮತ್ತು ಜನವರಿ 26 ರ ನಂತರ ಇತರೆಡೆಗಳಲ್ಲಿ ಬಿದ್ದಿರುವ ಧ್ವಜಗಳನ್ನು ನಾವು ಎತ್ತಿಡೋಣ. ಇದರ ಕುರಿತು ನಾವು ನಮ್ಮ ಮಿತ್ರರಿಗೂ, ನೆರೆಹೊರೆಯವರಿಗೂ ತಿಳಿಸೋಣ.

ಆಗಸ್ಟ್ 15 ರಂದು ಬೆಳಗ್ಗೆ ಧ್ವಜವಂದನೆಗಾಗಿ ನಾವೆಲ್ಲರೂ ಶಾಲೆಯಲ್ಲಿ ಸೇರೋಣ. ಧ್ವಜವಂದನೆಯಾದ ಬಳಿಕ ಶಾಲೆಗೆ ರಜೆ ಇರುವುದು ಎಲ್ಲರಿಗೂ ಗೊತ್ತಿರುವುದರಿಂದ ಹೆಚ್ಚಿನ ಮಕ್ಕಳು ಶಾಲೆಗೆ ಹೋಗದೇ ಮನೆಯಲ್ಲಿಯೇ ತುಂಬಾ ಹೊತ್ತಿನ ತನಕ ಮಲಗುವುದು, ಮನೆಯಲ್ಲಿ ದೂರದರ್ಶನವನ್ನು ನೋಡುತ್ತಾ ಕುಳಿತುಕೊಳ್ಳುವುದು, ಊರಿಗೆ ಹೋಗುವುದು ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ. ಅದರ ಬದಲು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯವೀರರನ್ನು ಮತ್ತು ಕ್ರಾಂತಿಕಾರರನ್ನು ನೆನಪಿಸಿಕೊಂಡು ಅವರಲ್ಲಿರುವ ಯಾವ ಗುಣದಿಂದಾಗಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ, ಆ ಗುಣಗಳನ್ನು ನಾವು ನಮ್ಮಲ್ಲಿ ತಂದುಕೊಂಡು ಅವರಂತೆ ಆದರ್ಶರಾಗಿ ವರ್ತಿಸಲು ಪ್ರಯತ್ನಿಸೋಣ.

ಲೋಕಮಾನ್ಯ ತಿಲಕರು, ಸ್ವಾತಂತ್ರ ವೀರ ಸಾವರಕರರು ಮುಂತಾದ ದೇಶಭಕ್ತರು ತಮ್ಮ ಶರೀರ ಮತ್ತು ಮನಸ್ಸುಗಳನ್ನು ಸುದೃಢವಾಗಿಟ್ಟುಕೊಳ್ಳಲು ಸಹ ಪ್ರಯತ್ನ ಮಾಡುತ್ತಿದ್ದರು. ನಮ್ಮ ಮನಸ್ಸು ಸುದೃಢವಾಗಿದ್ದರೆ ನಾವು ಯಾವುದೇ ಪ್ರಸಂಗವನ್ನು ಧೈರ್ಯದಿಂದ ಎದುರಿಸಬಲ್ಲೆವು. ಮನಸ್ಸು ಸುದೃಢವಾಗಲು ನಮ್ಮಲ್ಲಿ ಆತ್ಮವಿಶ್ವಾಸ ಬರುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ನಾವು ನಮ್ಮ ಇಷ್ಟದೇವತೆಯನ್ನು ಸ್ಮರಿಸುತ್ತ ಇರಬೇಕು. ದಿನದಲ್ಲಿ ಸ್ವಲ್ಪ ಸಮಯವಾದರೂ ನಾವು ದೇವರ ನಾಮವನ್ನು ಜಪಿಸಬೇಕು. ಶಾಲೆ ಅಥವಾ ತರಗತಿಗಳಿಗೆ ಹೋಗುತ್ತಿರುವಾಗ ? ಬರುತ್ತಿರುವಾಗ, ಊಟ ಮಾಡುತ್ತಿರುವಾಗ ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನು ನೋಡುತ್ತಿರುವಾಗ, ನಾವು ಮಹತ್ವದ ಕೆಲಸಗಳನ್ನು ಮಾಡದಿರುವ ಸಮಯದಲ್ಲಿ ಮನಸ್ಸಿನಲ್ಲಿ ನಾವು ನಾಮಸ್ಮರಣೆ ಮಾಡಬಹುದು.

ಆದುದರಿಂದ ಇಂದಿನಿಂದಲೇ ನಾವು ನಮ್ಮ ದೇಶದ ಉತ್ತಮ ಪ್ರಜೆಗಳಾಗಲು ಪ್ರಯತ್ನ ಮಾಡಬೇಕು. ನಮ್ಮ ಪುಸ್ತಕದಲ್ಲಿ ನೀಡಿದ ಪ್ರತಿಜ್ಞೆಯಂತೆ ನಾವು ರಾಷ್ಟ್ರಾಭಿಮಾನ ಮತ್ತು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸೋಣ ಮತ್ತು ಇಡೀ ಜಗತ್ತಿನಲ್ಲಿ ನಮ್ಮ ರಾಷ್ಟ್ರದ ಹೆಸರನ್ನು ಉಜ್ವಲಗೊಳಿಸಲು ಸನ್ನದ್ಧರಾಗಬೇಕು. ಇಂದಿನ ದಿನದಂದು ಭಾರತಮಾತೆಯನ್ನು ಆನಂದದಲ್ಲಿಡುವ ಪ್ರತಿಜ್ಞೆಯನ್ನು ಮಾಡೋಣ.

ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ ಆಧಾರ : www.hindujagruti.org

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English