ಕೊಡಗು : ಮಳೆಯ ಆರ್ಭಟಕ್ಕೆ 600ಕ್ಕೂ ಹೆಚ್ಚು ಮಂದಿ ರಕ್ಷಣೆಗೆ ಮೊರೆ

7:10 PM, Friday, August 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

Kodaguಮಡಿಕೇರಿ : ಕಾವೇರಿಯ ತವರು ಕೊಡಗು ಜಿಲ್ಲೆ ಮಳೆಯ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಅಲ್ಲಲ್ಲಿ ಗುಡ್ಡಗಳು ಕುಸಿಯುತ್ತಿದ್ದು ಶಿರಂಗಲಾ, ಮಾಂದಾಲ್ ಪಟ್ಟಿ, ಮುಕ್ಕೊಡ್ಲು,  ಹತ್ತಿಹೊಳೆ, ಕಲ್ಲೂರು, ಮುವತೊಕ್ಲು ಮೊದಲಾದ  ಗುಡ್ಡಪ್ರದೇಶದ ಜನರು  ಜಿಲ್ಲೆಯ ನಡುವೆ ಸಂಪರ್ಕ ಕಡಿತಗೊಂಡಿದ್ದು, ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್‌ ಕಾರ್ಯಾಚರಣೆ ವಿಳಂಬವಾಗಿದ್ದು, ಜಿಲ್ಲೆಯ ವಿವಿಧೆಡೆ ಅಂದಾಜು 600ಕ್ಕೂ ಹೆಚ್ಚು ಮಂದಿ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಹಲವರು ಮಣ್ಣಿನ ಅಡಿ ಹಾಗೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಸಾವು– ನೋವು ಹೆಚ್ಚಾಗುವ ಆತಂಕವಿದೆ. ಶುಕ್ರವಾರ ಮಾದಾಪುರ ಮುವತೊಕ್ಲು ಗ್ರಾಮದಲ್ಲಿ ಗುಡ್ಡ ಕುಸಿದು ಸಾಬು (30) ಅವರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 4ಕ್ಕೆ ಏರಿದೆ.

ಹಾಲೇರಿ, ಗಾಳಿಬೀಡು, ಜೋಡಪಾಲ, 2ನೇ ಮೊಣ್ಣಂಗೇರಿ, ಮೇಘತ್ತಾಳ್‌, ತಂತಿಪಾತ, ಮುಕ್ಕೊಡ್ಲು ಬೆಟ್ಟದಲ್ಲಿ ಸಂತ್ರಸ್ತರು ರಕ್ಷಣೆಗೆ ಮೊರೆಯಿಡುತ್ತಿದ್ದಾರೆ. ಆ ಸ್ಥಳಕ್ಕೆ ಎನ್‌ಡಿಆರ್‌ಎಫ್‌ ಹಾಗೂ ಯೋಧರಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಮಕ್ಕಂದೂರು ಆಸುಪಾಸಿನ ಹಲವು ಗ್ರಾಮಗಳೂ ಉಳಿದಿಲ್ಲ. ಗುಡ್ಡ ಕುಸಿಯುತ್ತಿರುವುದನ್ನು ಕಂಡು ರಾತ್ರೋರಾತ್ರಿ ಇಳಿದು ಬಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅವರ ಮನೆಯಲ್ಲಿ 150 ಮಂದಿ ಆಶ್ರಯ ಪಡೆದಿದ್ದಾರೆ. ಅವರ ರಕ್ಷಣೆಯೂ ಸಾಧ್ಯವಾಗಿಲ್ಲ. ರಕ್ಷಣಾ ಸಿಬ್ಬಂದಿಯ ಮೇಲೆಯೇ ಮಣ್ಣು ಕುಸಿಯುತ್ತಿದೆ. ಜತೆಗೆ, ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿಯಿದೆ.

kodagu ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ರಸ್ತೆಯಲ್ಲಿ ಕುಸಿದಿರುವ ಮನೆಗಳು

ಹಾರಂಗಿ ಹಿನ್ನೀರು ಮಕ್ಕಂದೂರು ಬೆಟ್ಟವನ್ನೇ ಬಲಿ ಪಡೆಯುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ಪ್ರಸಿದ್ಧ ಕೋಟೆಬೆಟ್ಟವೂ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಬೆಟ್ಟದ ತಪ್ಪಲಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ.

ಮಡಿಕೇರಿ–ಮಂಗಳೂರು ನಡುವೆ ಇಡೀ ಗುಡ್ಡಕ್ಕೆ ಗುಡ್ಡವೇ ಕುಸಿದು ಬೆಟ್ಟದ ತಪ್ಪಲಿನ ಮನೆಗಳ ಮೇಲೆ ಬಿದ್ದಿದೆ. ಮೈಸೂರು– ಬಂಟ್ವಾಳ ರಸ್ತೆಯ ಉದ್ದಕ್ಕೂ ಮಣ್ಣು ಬಿದ್ದಿದ್ದು ಸದ್ಯಕ್ಕೆ ಸಂಚಾರ ಸಾಧ್ಯ ಅಗುವುದಿಲ್ಲ.

ರಸ್ತೆ, ಮನೆ, ಆಸ್ತಿಪಾಸ್ತಿ ಸೇರಿದಂತೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದು ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ‘ಹಿಂದೆ ಕೊಡಗಿನಲ್ಲಿ ಮಳೆಯಾದರೂ ಇಷ್ಟೊಂದು ಪ್ರಮಾಣದಲ್ಲಿ ಸಮಸ್ಯೆ ಉಂಟಾಗಿರಲಿಲ್ಲ’ ಎಂದರು.

‘ಸಂತ್ರಸ್ತರ ಕಾರ್ಯಾಚರಣೆಗೆ ಮೂರು ಹೆಲಿಕಾಪ್ಟರ್‌ಗಳ ಸನ್ನದ್ಧವಾಗಿದ್ದರೂ ಹವಾಮಾನ ವೈಪರೀತ್ಯದಿಂದ ರಕ್ಷಣೆ ಸಾಧ್ಯವಾಗುತ್ತಿಲ್ಲ. ಕಾರವಾರದಿಂದ ನೌಕಾಪಡೆ, ಸೇನೆಯಿಂದ ಹೆಚ್ಚುವರಿಯಾಗಿ 80 ಯೋಧರನ್ನು ಕರೆಸಿಕೊಳ್ಳಲಾಗುತ್ತಿದೆ. ರಕ್ಷಣೆಗೆ ಬೇಕಾದ ಸಲಕರಣೆ ತರುತ್ತಿದ್ದಾರೆ. ಮತ್ತೆ 23 ಕಡೆ ಗಂಜಿಕೇಂದ್ರ ತೆರೆಯಲು ಸೂಚನೆ ನೀಡಿದ್ದೇನೆ’ ಎಂದು ಮಾಹಿತಿ ನೀಡಿದರು.

kodagu ‘40 ಜೆಸಿಬಿ ಬಳಸಿ ರಸ್ತೆಗಳ ಮಣ್ಣು ತೆರವು ಮಾಡಲಾಗುವುದು. ರಕ್ಷಣಾ ಕಾರ್ಯದ ಬಳಿಕ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು’ ಎಂದು ಹೇಳಿದರು.

‘ವಿವಿಧ ಜಿಲ್ಲೆಗಳಿಂದ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಮೈಸೂರಿನಿಂದ ಎರಡು ವೈದ್ಯರು ಹಾಗೂ ನರ್ಸ್‌ ತಂಡಗಳು ಆಗಮಿಸುತ್ತಿವೆ. ಹಾಲಿನ ಪೌಡರ್‌, ಗ್ಯಾಸ್‌, ಸೀಮೆಎಣ್ಣೆ, ಔಷಧಿ, ಅಕ್ಕಿ, ಹೊದಿಕೆ, ಬಟ್ಟೆಗಳನ್ನು ‍ಪೂರೈಕೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿದು ರಸ್ತೆ ಹಾಗೂ ತಡೆಗೋಡೆಗೆ ಹಾನಿಯುಂಟಾಗಿದೆ. ಗ್ರಾಮ ಸಂಪರ್ಕ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕುಶಾಲನಗರ ಸಮೀಪದ ಕಣಿವೆ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿ ಕಾವೇರಿ ಮತ್ತು ಹಾರಂಗಿ ನದಿಗಳು ಸಂಗಮಗೊಂಡು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಗೆ ತೂಗು ಸೇತುವೆಗೆ ಹಾನಿ ಉಂಟಾಗಿದೆ. ಕೊಡಗು ಹಾಗೂ ಮೈಸೂರು ಜಿಲ್ಲೆಯ ಗಡಿಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.

ಕಾವೇರಿ ಮತ್ತು ಹಾರಂಗಿ ನದಿಗಳ ಪ್ರವಾಹದಿಂದ ಕುಶಾಲನಗರ ಸಮೀಪದ ಕಣಿವೆ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿಯ ತೂಗು ಸೇತುವೆಗೆ ಹಾನಿ ಉಂಟಾಗಿದೆ

ಕುಸಿದ ಅಂತರರಾಜ್ಯ ಹೆದ್ದಾರಿ: ಧಾರಾಕಾರವಾಗಿ ಸುರಿದ ಮಳೆಗೆ ಗೋಣಿಕೊಪ್ಪಲು ಹುದಿಕೇರಿ ಶ್ರೀಮಂಗಲ ನಡುವಿನ ಅಂತರರಾಜ್ಯ ಹೆದ್ದಾರಿ ಟಿ.ಶೆಟ್ಟಿಗೇರಿ ಪೋಕಳತೋಡ್ ಬಳಿ ಕುಸಿದಿದೆ. ಈ ಮಾರ್ಗದ ಬಸ್ ಸಂಚಾರ ಶುಕ್ರವಾರ ಮುಂಜಾನೆಯಿಂದ ಸ್ಥಗಿತಗೊಂಡಿದೆ. ಬೈಕ್, ಕಾರು ಮತ್ತಿತರ ಸಣ್ಣಪುಟ್ಟ ವಾಹನಗಳು ಮಾತ್ರ ಸಂಚರಿಸುತ್ತಿವೆ.

kodagu ಮೈಸೂರು– ಮಡಿಕೇರಿ ಬಸ್‌ ಸಂಚಾರ ಸ್ಥಗಿತ: ಭಾರಿ ಮಳೆಯಿಂದ ಅಲ್ಲಲ್ಲಿ ಗುಡ್ಡ ಕುಸಿದಿರುವ ಕಾರಣ ಮೈಸೂರಿನಿಂದ ಕೊಡಗಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೈಸೂರು ಮೂಲಕ ಕೊಡಗು ತಲುಪುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು ತಮ್ಮ ಸಂಚಾರವನ್ನು ಕುಶಾಲನಗರಲ್ಲೇ ಕೊನೆಗೊಳಿಸಿದವು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರ ಪತಿ, ಕುಟುಂಬಸ್ಥರು ಹಾಗೂ ಅವರ ಗ್ರಾಮದ 300 ಮಂದಿ ಮಕ್ಕಂದೂರು ಗುಡ್ಡದ ತಪ್ಪಲಿನಲ್ಲಿ ಸಿಲುಕಿಕೊಂಡಿದ್ದಾರೆ.

ಮೂರು ದಿನಗಳಿಂದ ಸಂಕಷ್ಟದಲ್ಲಿರುವ ಎಲ್ಲರನ್ನೂ ರಕ್ಷಣೆ ಮಾಡುವಂತೆ ವೀಣಾ ಅಚ್ಚಯ್ಯ ಅವರು ಸಚಿವರಾದ ದೇಶಪಾಂಡೆ ಹಾಗೂ ಸಾ.ರಾ.ಮಹೇಶ್‌ ಎದುರು ಕಣ್ಣೀರು ಹಾಕಿದರು. ‘ಎಲ್ಲರೂ ಆಚೆಗೆ ಕರೆತನ್ನಿ, ನಾವು ಆಶ್ರಯ ಕಲ್ಪಿಸುತ್ತೇವೆ’ ಎಂದು ಪರಿಪರಿಯಾಗಿ ಬೇಡಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಸಹ ರಕ್ಷಣಾ ಕಾರ್ಯ ವಿಳಂಬ ಮಾಡಲಾಗುತ್ತಿದೆ’ ಎಂದು ಸಚಿವರ ವಿರುದ್ಧ ಕಿಡಿಕಾರಿದರು. ಇಬ್ಬರನ್ನೂ ಸಮಾಧಾನ ಪಡಿಸಿದ ಸಚಿವರು, ‘ಎಲ್ಲರ ರಕ್ಷಣೆಯೂ ಸರ್ಕಾರದ ಹೊಣೆ. ಸ್ವಲ್ಪ ತಾಳ್ಮೆ ವಹಿಸಿ’ ಎಂದು ಮನವಿ ಮಾಡಿದರು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಉಂಟಾದ ಭೂಕುಸಿತಕ್ಕೆ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂವತ್ತೊಕ್ಲು ಗ್ರಾಮದ ಮುಕ್ಕಾಟಿರ ಉತ್ತಪ್ಪ (ಸಾಬು) ಅವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.

ಗುರುವಾರ ಸಂಜೆ 5ರ ವೇಳೆಗೆ ಸಾಬು (62 ವರ್ಷ) ಹಾಗೂ ಪತ್ನಿ ತಂಗಮ್ಮ ಮನೆಯಲ್ಲಿರುವಾಗಲೇ ಭೂ ಕುಸಿತ ಉಂಟಾಗಿದೆ. ಇದನ್ನು ಗಮನಿಸಿದ ತಂಗಮ್ಮ ಅವರು ಪತಿಯನ್ನು ಕೂಗಿ ಮನೆಯಿಂದ ಹೊರಗೆ ಓಡಿದ್ದಾರೆ. ಆದರೆ, ಮಲಗಿದ್ದ ಸಾಬು ಹೊರಗೆ ಬರುವ ಮುನ್ನವೇ ಮನೆಯ ಮೇಲೆ ಮಣ್ಣು ಬಿದ್ದು ದುರಂತ ಸಂಭವಿಸಿದೆ.

Kodagu

Kodagu

Kodagu

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English