ಮಂಗಳೂರು: ನವರಾತ್ರಿಯ ಕಡೆಯ ದಿನವಾದ ಇಂದು ವಿಜಯದಶಮಿ ಆಚರಿಸಲಾಗುತ್ತದೆ. ಶುಭಕಾರ್ಯಗಳಿಗೆ ಈ ದಿನ ಸೂಕ್ತವೆಂಬ ನಂಬಿಕೆಯಿದೆ. ಅದರಲ್ಲೂ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಪ್ರಶಸ್ತವಾದ ದಿನ ಎಂಬ ಪ್ರತೀತಿ. ಈ ಹಿನ್ನೆಲೆಯಲ್ಲಿ ಇಲ್ಲಿನ ಮಂಗಳಾದೇವಿ ದೇವಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.
ಇಂದು ಮಂಗಳಾದೇವಿ ದೇವಾಲಯದಲ್ಲಿ ಮಕ್ಕಳ ಅಕ್ಷರಾಭ್ಯಾಸ ಪೂಜೆಯು ಬೆಳಗ್ಗೆ 9 ಗಂಟೆಯಿಂದ ಶುರುವಾಗಿ ಮಧ್ಯಾಹ್ನ 12 ಗಂಟೆವೆರೆಗೂ ನಡೆಯಿತು.
ಈ ಸಂದರ್ಭ ಸುಮಾರು 300 ಪುಟಾಣಿ ಮಕ್ಕಳು ಅಕ್ಷರಾಭ್ಯಾಸ ಪೂಜೆಯಲ್ಲಿ ಭಾಗವಹಿಸಿ, ತಮ್ಮ ವಿದ್ಯಾಭ್ಯಾಸವನ್ನು ಆರಂಭಿಸಿದರು. 12 ಪುರೋಹಿತರು ಈ ಅಕ್ಷರಾಭ್ಯಾಸದ ಪೌರೋಹಿತ್ಯ ವಹಿಸಿದ್ದರು.
ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ಪ್ರಾರ್ಥನೆಯೊಂದಿಗೆ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಮುಂದೆ ಮಕ್ಕಳು ಜ್ಞಾನವಂತರಾಗುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ಸರಸ್ವತಿ ಪೂಜೆ ಮಾಡಿ, ಮಕ್ಕಳ ಬೆರಳ ತುದಿಯನ್ನು ಅವರ ತಾಯಿ- ತಂದೆ ಹಿಡಿದು ಅಕ್ಕಿಯ ಮೇಲೆ ಓಂ ನಾಮ, ಶ್ರೀನಾಮ ಹಾಗೂ ವರ್ಣಮಾಲೆಯ ಮೊದಲ ಅಕ್ಷರವನ್ನು ಬರೆಸಲಾಗುತ್ತದೆ.
Click this button or press Ctrl+G to toggle between Kannada and English