ಮಂಗಳೂರು: ಸಾರ್ವಜನಿಕರಿಗೆ ಮಾದಕ ವಸ್ತುವಾದ ಕೋಕೆನ್ ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಗೋವಾದಿಂದ ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಕುಂಜತ್ತೂರಿನ ಅಜ್ಮಲ್ ಪುಲಿಕ್ಕಲ್ ಮೊಹಮ್ಮದ್(44) ಬಂಧಿತ ಆರೋಪಿ.
ಈ ಹಿಂದೆ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮರೋಳಿ ಬಳಿಯಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಕೋಕೆನ್ನ್ನು ಹೊಂದಿದ್ದ 5 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ 70,000 ರೂ. ಮೌಲ್ಯದ ಕೋಕೆನ್, ಮೂರು ಕಾರು, ನಗದು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದರು.
ಇನ್ನು ಈ ಪ್ರಕರಣದಲ್ಲಿನ ಆರೋಪಿಗಳಿಗೆ ಗೋವಾದಿಂದ ಮಾದಕ ವಸ್ತುವಾದ ಕೋಕೆನ್ನ್ನು ಪೂರೈಕೆ ಮಾಡಿದ ವ್ಯಕ್ತಿ ತಲೆಮರೆಸಿಕೊಂಡಿದ್ದ. ಈ ಆರೋಪಿಯ ಬಗ್ಗೆ ಮಾಹಿತಿ ಪಡೆದ ಮಂಗಳೂರು ನಗರ ಸಿಸಿಬಿ ಪೊಲೀಸರು ಮತ್ತು ಮಂಗಳೂರು ಪೂರ್ವ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಈತ ಗೋವಾದಿಂದ ಮಂಗಳೂರಿಗೆ ಅಕ್ರಮವಾಗಿ ಕೋಕೆನ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಈತನ ವಿರುದ್ಧ ಈ ಹಿಂದೆ ನಕಲಿ ಪಾಸ್ಪೋರ್ಟ್ ಹೊಂದಿದ ಬಗ್ಗೆ 2008 ರಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಶಾಂತಾರಾಮ ಹಾಗೂ ಸಿಬ್ಬಂದಿ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ನಾಯಕ್ ಮತ್ತು ಸಿಬ್ಬಂದಿ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English