ತುಳು ಚಿತ್ರಕ್ಕೆ ಮಂಗಳೂರಿನಲ್ಲಿ ಇಲ್ಲ ಥಿಯೇಟರ್: ಉಮಿಲ್ ಚಿತ್ರ ತಂಡ ಬೇಸರ

3:53 PM, Friday, December 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

umilಮಂಗಳೂರು: ತುಳು ಚಿತ್ರರಂಗ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದೀಗ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಂಡು ‘ಉಮಿಲ್’ ಎಂಬ ಸಿನಿಮಾ‌ ನಿರ್ಮಾಣವಾಗಿ ಇಂದು ಬಿಡುಗಡೆಯಾಗಿದೆ. ಆದರೆ ಪರಭಾಷೆ ಚಿತ್ರಗಳ ಭರಾಟೆಯಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಮಾಡಿರುವ ಮೊದಲ ಚಿತ್ರಕ್ಕೆ ಮಂಗಳೂರಿನಲ್ಲಿ ಥಿಯೇಟರ್ ಇಲ್ಲದಂತಾಗಿದೆ.

ಭವಾನಿ ಕ್ರಿಯೇಷನ್ ಬ್ಯಾನರ್ನಲ್ಲಿ ನಿರ್ಮಾಣವಾದ ಉಮಿಲ್ ಚಿತ್ರ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣ ಮಾಡಲಾದ ಚಿತ್ರ. ಕನ್ನಡದ ‘ಈಗ’ ಚಿತ್ರದಲ್ಲಿ ನೊಣದ ಪ್ರಮುಖ ಪಾತ್ರ ಇದ್ದರೆ, ತುಳುವಿನ ಉಮಿಲ್ ಚಿತ್ರದಲ್ಲಿ ಸೊಳ್ಳೆಯನ್ನು ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಚಿತ್ರಿಸಿ ನಿರ್ಮಾಣ ಮಾಡಲಾಗಿದೆ.

ತುಳು ಚಿತ್ರರಂಗದಲ್ಲಿ ಹೊಸ ಪ್ರಯತ್ನವನ್ನು ಚಿತ್ರ ತಂಡ ಮಾಡಿದೆ. ಎರಡು ವರ್ಷಗಳಿಂದ ಶ್ರಮಪಟ್ಟು ಮಾಡಲಾದ ಈ ತುಳು ‌ಸಿನಿಮಾ ತುಳುವಿನ 101ನೇ ಸಿನಿಮಾವಾಗಿದ್ದು, ಡಿಸೆಂಬರ್ 7 ರಂದು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ತಿಂಗಳ ಹಿಂದೆಯೆ ಘೋಷಿಸಿತ್ತು.

ತುಳು ಚಿತ್ರಕ್ಕೆ ಬಹುಪಾಲು ಮಾರುಕಟ್ಟೆ ಇರುವುದು ಮಂಗಳೂರಿನ ಥಿಯೇಟರ್ಗಳಲ್ಲಿ. ಮಂಗಳೂರಿನ ಸಾಮಾನ್ಯ ಜನರು ತುಳು ಸಿನಿಮಾ ವೀಕ್ಷಿಸಲು ಥಿಯೇಟರ್ಗೆ ಬರುತ್ತಾರೆ. ಮಂಗಳೂರಿನ ಕೆಲವೇ ಥಿಯೇಟರ್ಗಳು ತುಳು ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುತ್ತವೆ. ಆದರೆ ತಮಿಳು ಸೇರಿದಂತೆ ಇತರ ಭಾಷೆಯ ಸಿನಿಮಾಗಳ ಪ್ರದರ್ಶನ ನಡೆಯುತ್ತಿರುವುದರಿಂದ ಉಮಿಲ್ ತುಳು ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಸಿಕ್ಕಿಲ್ಲ. ಮಂಗಳೂರು ಪ್ರಮುಖ ಮಾರುಕಟ್ಟೆ ಆಗಿರುವುದರಿಂದ ಥಿಯೇಟರ್ ಸಿಗದಿದ್ದಕ್ಕೆ ಚಿತ್ರತಂಡಕ್ಕೆ ಬೇಸರ ಇದೆ.

ಮಂಗಳೂರು ನಗರ ಹೊರತುಪಡಿಸಿ ದ.ಕ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಥಿಯೇಟರ್ ಸಿಕ್ಕಿದೆ. ಆದರೆ ಮಂಗಳೂರಿನಲ್ಲಿ ಸಾಮಾನ್ಯ ಜನರು ಬಹಳಷ್ಟು ಸಂಖ್ಯೆಯಲ್ಲಿ ಬಂದು ವೀಕ್ಷಿಸುವುದರಿಂದ ತುಳು ಚಿತ್ರಕ್ಕೆ ದೊಡ್ಡ ನಷ್ಟವಾಗಲಿದೆ. ಆದ ಕಾರಣ ಚಿತ್ರತಂಡ ಮಂಗಳೂರಿನ ಮಲ್ಟಿಪ್ಲೆಕ್ಸ್ನಲ್ಲಿ ಮಾತ್ರ ಬಿಡುಗಡೆ ಮಾಡಿದ್ದು, ಇಂದು ಸಿನಿಮಾದ ಬಿಡುಗಡೆ ಸಮಾರಂಭವನ್ನು ಮಂಗಳೂರಿನ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ ಮಾಡಲಾಯಿತು.

ಮೊದಲ ಗ್ರಾಫಿಕ್ಸ್ ತಂತ್ರಜ್ಞಾನ ಹೊಂದಿರುವ ಈ ಸಿನಿಮಾ ಬಿಡುಗಡೆಗೆ ಮುಂಚೆಯೇ ಚಿತ್ರ ಹಿಂದಿ ಭಾಷೆಗೆ ಡಬ್ಬಿಂಗ್ಗೆ ಮಾರಾಟವಾಗಿದೆ. ಅಷ್ಟು ಮಾತ್ರವಲ್ಲದೆ ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಹಾಡು ಹಾಡುವ ಮೂಲಕ ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ಹಾಡಿದ್ದಾರೆ. ಇಷ್ಟೆಲ್ಲಾ ವಿಶೇಷತೆ ಇದ್ದರೂ ಮಂಗಳೂರಿನಲ್ಲಿ ಥಿಯೇಟರ್ ಸಿಗದಿರುವುದು ಚಿತ್ರ ತಂಡದ ಬೇಸರಕ್ಕೆ ಕಾರಣವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English