ಮಡಿಕೇರಿ : ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರು ಪ್ರಜ್ಞಾವಂತ ಸಮಾಜ ಬಡಜನರು ಹಾಗೂ ದುರ್ಬಲರಾಗಿರುವ ದಲಿತರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತಿಸದೆ ಇರುವುದೇ ಈ ವರ್ಗಗಳ ಬದುಕು ಇಂದಿಗೂ ಹೀನಾಯವಾಗಿರಲು ಕಾರಣವೆಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ನಗರದ ಬಾಲಭವನ ಸಭಾಂಗಣದಲ್ಲಿ ನಡೆದ ಸ್ವತಂತ್ರ ಭಾರತದಲ್ಲಿ ಬಹುಜನರು ಅವಲಂಬಿತರು ಏಕೆ? ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಡಜನರು, ಹಿಂದುಳಿದ ವರ್ಗದವರು, ದಲಿತರು, ಕೂಲಿ ಕಾರ್ಮಿಕರು ತಮ್ಮ ಜೀವನದಲ್ಲಿ ಏಳಿಗೆಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಕೂಲಿ ಕಾರ್ಮಿಕರ ಜೀವನ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಸ್ತ್ರವಾಗಿರುವ
ಮತವನ್ನು ತಾಯಿಯಂತೆ ಕಾಪಾಡಬೇಕು ಎನ್ನುವ ಮಾತಿದೆ. ಆದರೆ ಇಂದು ಹಣ ಮತ್ತು ಮದ್ಯಕ್ಕಾಗಿ ಮತಗಳು ಮಾರಾಟವಾಗುತ್ತಿವೆ. ಬಡವರ ಪರವಾಗಿ ಹೋರಾಟ ಮಾಡುವವರಿಗೆ ಯಾರೂ ಮತ ಹಾಕದ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಲ್ಲರೆ ಹಣಕ್ಕಾಗಿ ಮತ ಮಾರಾಟ ಮಾಡುವುದನ್ನು ನಿಲ್ಲಿಸಿ ಭ್ರಷ್ಟ ವ್ಯವಸ್ಥೆಯ ಮತ್ತು ಪ್ರಾಮಾಣಿಕ ವ್ಯಕ್ತಿಗಳ ವಿರುದ್ಧ ತೀರ್ಪು ನೀಡಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗುತ್ತದೆ, ಅಲ್ಲದೆ ಬಡವರ ಪರವಾದ ಧ್ವನಿಗೆ ಸ್ಪಂದನೆ ಸಿಗುತ್ತದೆ ಎಂದು ಗೋಪಾಲ್ ಅಭಿಪ್ರಾಯಪಟ್ಟರು.
ಬಡವರ ಪರವಾಗಿ ಅಧಿವೇಶನಗಳಲ್ಲಿ ಮಾತನಾಡುವವರೆ ಇಲ್ಲದಾಗಿದೆ. ದಲಿತರು, ಶೋಷಿತರ ಮೇಲೆ ಮತ್ತೆ ಮತ್ತೆ ಉಳ್ಳವರಿಂದ ದೌರ್ಜನ್ಯ ನಡೆಯುತ್ತಿದೆ. ಬಡವರಿಗಾಗಿ ಮೀಸಲಿರುವ ಹಲವು ಕಾಯ್ದೆಗಳು ಪುಸ್ತಕಗಳಿಗೆ ಸೀಮಿತವಾಗಿದೆ ಹೊರತು ಯಾವುದೂ ಜಾರಿಗೆ ಬರುತ್ತಿಲ್ಲ. ಇದರ ನಡುವೆಯೇ ಸಂವಿಧಾನವನ್ನು ತಿರುಚುವ ಷಡ್ಯಂತ್ರಗಳು ನಡೆಯುತ್ತಿದ್ದು, ಈ ವಿಕೃತ ಶಕ್ತಿಗಳ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತುವ ಅನಿವಾರ್ಯತೆ ಇದೆ ಎಂದರು.
ಮೈಸೂರಿನ ಮಹಾರಾಜ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿ.ಷಣ್ಮುಗಂ ಮಾತನಾಡಿ, ಬಹುಜನರು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು, ಶೋಷಣೆಗೆ ಒಳಗಾಗುತ್ತಲೇ ಬರುತ್ತಿದ್ದಾರೆ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಕನಿಷ್ಠ ಅಗತ್ಯತೆಗಳು ಬೇಕು. ಆದರೆ ಅದನ್ನೇ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ನಿರಾಕರಣೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶದಲ್ಲಿ ಬಡತನ ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಇಂದಿಗೂ ಕಾರ್ಮಿಕರು ಆರ್ಥಿಕವಾಗಿ ಸ್ವತಂತ್ರರಾಗಲು ಸಾಧ್ಯವಾಗುತ್ತಿಲ್ಲ. ಆಳುವವರು ಸಂವಿಧಾನದ ಅನುಚ್ಛೇದವನ್ನು ಜಾರಿಗೆ ತಂದಾಗ ಮಾತ್ರ ಸಂವಿಧಾನಕ್ಕೆ ಜೀವ ಬರುತ್ತದೆ ಎಂದರು.
ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಬಡ ಹಾಗೂ ದಲಿತ ವರ್ಗ ಸರ್ವರಿಗೆ ಸಮಾನವಾಗಿ ಬದುಕು ಕಟ್ಟಿಕೊಳ್ಳಬೇಕೆಂದು ಡಾ.ವಿ.ಷಣ್ಮುಗಂ ಸಲಹೆ ನೀಡಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್.ಮುತ್ತಪ್ಪ ಮಾತನಾಡಿದ ಸಂವಿಧಾನ ನೀಡಿರುವ ಹಕ್ಕುಗಳನ್ನು ನ್ಯಾಯಯುತವಾಗಿ ಪಡೆಯಲು ಎಲ್ಲಾ ಬಡವರ್ಗ ಮತ್ತು ಕಾರ್ಮಿಕರು ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಗಣೇಶ್, ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ, ಸಹ ಕಾರ್ಯದರ್ಶಿ ಸತೀಶ್ ತಲ್ತರೆ, ಶಿವಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Click this button or press Ctrl+G to toggle between Kannada and English