ಮಡಿಕೇರಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾ.ಪಂ ನೌಕರರ ಸಂಘ ಅನಿರ್ದಿಷ್ಟಾವಧಿ ಧರಣಿ ಮುಷ್ಕರವನ್ನು ಆರಂಭಿಸಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾ.ಪಂ ನೌಕರರ ಸಂಘದ ಜಿಲ್ಲಾ ಘಟಕ ಸರ್ಕಾರಗಳ ನಿರ್ಲಕ್ಷ್ಯ ಮನೋಭಾವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನೌಕರರಿಂದ ದುಡಿಸಿಕೊಳ್ಳುವ ಆಸಕ್ತಿಯನ್ನು ತೋರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೌಕರರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲವೆಂದು ಆರೋಪಿಸಿದರು.
ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಗ್ರಾ.ಪಂ.ಗಳಲ್ಲಿ ಸುಮಾರು 65 ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಅವರ ಸಂಬಳಕ್ಕೆ ವಾರ್ಷಿಕ 900ರೂ.ಗಳ ಅನುದಾನದ ಅಗತ್ಯವಿದೆ. ಹಿಂದಿನ ಸರಕಾರ 518 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಇನ್ನೂ ೩೮೨ಕೋಟಿ ರೂ.ಬಾಕಿ ಉಳಿದಿದೆ.14ನೇ ಹಣಕಾಸು ಆಯೋಗದ ಶೇ.10ರಷ್ಟನ್ನು ಸಿಬ್ಬಂದಿಗೆ ವೇತನಕ್ಕೆ ಬಳಸಿಕೊಳ್ಳಲು ಸರಕಾರ ಅನುಮೋದನೆ ನೀಡಿದ್ದರೂ, ಚುನಾಯಿತ ಸದಸ್ಯರ ಒತ್ತಡಕ್ಕೆ ಒಳಗಾಗುವ ಅಧಿಕಾರಿಗಳು ಸಿಬ್ಬಂದಿಗೆ ಸಮಸರ್ಪಕವಾಗಿ ವೇತನ ನೀಡುತ್ತಿಲ್ಲ. ಕೆಲವು ಪಂಚಾಯಿತಿಗಳಲ್ಲಿ 5-5 ತಿಂಗಳುಗಳಿಂದ ವೇತನ ಪಾವತಿಯಾಗದೆ ಬಾಕಿ ಉಳಿದಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಕೆಲವು ಗ್ರಾ.ಪಂ.ಗಳಲ್ಲಿ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡಿ ಕೆಲಸದಿಂದ ತೆಗೆದು ಹಾಕುವ ಕಾರ್ಯ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಅಂತಹ ಪಂಚಾಯಿತಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದೂ ಅವರು ಇದೇ ಸಂದರ್ಭ ತಿಳಿಸಿದರು.
ಬೇಡಿಕೆಗಳು
2019ರ ಜು.23ರ ಆದೇಶದಂತೆ ಎಲ್ಲಾ ಸಿಬ್ಬಂದಿಗಳಿಗೆ ಅನುಮೋದನೆ ನೀಡಬೇಕು. ಬಾಕಿ ಉಳಿದಿರುವ 12-14 ತಿಂಗಳ ವೇತನವನ್ನು ಪಾವತಿಸಬೇಕು. ಬಿಲ್ ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್, ಬಡ್ತಿ ಕೋಟಾವನ್ನು ಹೆಚ್ಚಿಸಬೇಕು. 14ನೇ ಹಣಕಸು ಆಯೋಗದ ಹಣದಲ್ಲಿ ವೇತನ ಪಾವತಿಸಬೇಕು. ಪೆನ್ಷನ್ ಮಂಜೂರು ಮಾಡುವುದರೊಂದಿಗೆ ಗ್ರಾಜ್ಯುಟಿ(ಉಪಧನ) ಸಿಗುವಂತಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ನಂತರ ಪಂಚಾಯಿತಿ ನೌಕರರನ್ನು ಬಿಪಿಎಲ್ ಪಡಿತರ ವ್ಯವಸ್ಥೆಯಡಿ ಸೇರಿಸಬೇಕು ಮತ್ತು ಆದಾಯ ಮಿತಿಯನ್ನು ರೂ.1.20ಲಕ್ಷದಿಂದ 2ಲಕ್ಷಕ್ಕೆ ಏರಿಕೆ ಮಾಡಬೇಕೆಂದು ಒತ್ತಾಯಿಸಿ ಆಹಾರ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಬಿ. ಹರೀಶ್, ಮಡಿಕೇರಿ ತಾಲೂಕು ಖಜಾಂಚಿ ಎಂ.ಕೆ.ವಸಂತ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
Click this button or press Ctrl+G to toggle between Kannada and English