ಮಂಗಳೂರು: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತಗೊಳಿಸುವ ಅಥವಾ ಗೋವಾದ ಕಚೇರಿ ಜತೆಯಲ್ಲಿ ವಿಲೀನಗೊಳಿಸುವ ಯಾವುದೇ ಪ್ರಸ್ತಾಪಗಳು ಸರಕಾರದ ಮುಂದಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಹುದ್ದೆ ಇದೆ. ಅದೇ ರೀತಿ ಗೋವಾದಲ್ಲೂ ಪ್ರಧಾನ ಆಯುಕ್ತರ ಹುದ್ದೆ ಇದೆ. ಈ ಎರಡು ಕಚೇರಿಯ ಹುದ್ದೆಯನ್ನು ಸೇರಿಸಿ ಒಂದೇ ಪ್ರಧಾನ ಆಯುಕ್ತರನ್ನು ನಿಯೋಜನೆ ಮಾಡಬೇಕು ಎಂಬ ಪ್ರಸ್ತಾಪ ಇದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಧಾನ ಆಯುಕ್ತರ ಹುದ್ದೆ ಮಾತ್ರ ಗೋವಾಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಆದರೆ ಇಡೀ ಕಚೇರಿ ಗೋವಾದ ಕಚೇರಿ ಜತೆಯಲ್ಲಿ ವಿಲೀನವಾಗುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಅತ್ತಾವರದ ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟಿನ ಆದಾಯ ಬರುತ್ತಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಸಾವಿರ ಕೋಟಿ ರೂ.ಗೂ ಹೆಚ್ಚು ಆದಾಯ ಕೊಡುವ ಕೇಂದ್ರವಾಗಿದೆ. ಹಾಗಾಗಿ ಇದನ್ನು ಅರಿತುಕೊಂಡು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿದ್ದಾರೆ. ನಾನೂ ಕೂಡಾ ಈ ಬಗ್ಗೆ ಸದಾನಂದ ಗೌಡ ಹಾಗೂ ಪ್ರಹ್ಲಾದ್ ಜೋಶಿ ಜತೆ ಮಾತನಾಡಿ ಪ್ರಧಾನ ಆಯುಕ್ತರ ಕಚೇರಿಯನ್ನು ಇಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಆದಾಯ ತೆರಿಗೆ ಕಚೇರಿಯೇ ಇಲ್ಲಿಂದ ಗೋವಾಕ್ಕೆ ಹೋಗಲಿದೆ ಎಂಬ ಅರ್ಥದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿಯ ರಾಜಕೀಯ ಲಾಭವನ್ನು ಎತ್ತಿಕೊಳ್ಳುವ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ. ಇಲ್ಲಿನ ತೆರಿಗೆದಾರರು ಮುಂದಿನ ದಿನಗಳಲ್ಲಿ ಗೋವಾಕ್ಕೆ ಅಲೆದಾಡಬೇಕಾಗುತ್ತದೆ ಎಂದೆಲ್ಲ ಸುಳ್ಳು ಸುದ್ದಿಗಳನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ. ಕಚೇರಿ ಸ್ಥಳಾಂತರ ಆಗುತ್ತದೆ ಎಂದು ಹೇಳಿಕೆ ನೀಡಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸವನ್ನು ಮಾಡಬಾರದು ಎಂದು ಶಾಸಕ ಕಾಮತ್ ಕಾಂಗ್ರೆಸ್‍ಗೆ ಕಿವಿಮಾತು ಹೇಳಿದರು.
ಅತ್ತಾವರ ಆದಾಯ ತೆರಿಗೆ ಕಚೇರಿ ಬಳಿ ರಸ್ತೆ ಉದ್ಘಾಟಿಸಿದ ಶಾಸಕ ಕಾಮತ್
ಮಂಗಳೂರು ಮಹಾನಗರ ಪಾಲಿಕೆಯ ಕೋರ್ಟ್ ವಾರ್ಡಿನ ಅತ್ತಾವರ ಕೇಂದ್ರೀಯ ಆದಾಯ ತೆರಿಗೆ ಕಚೇರಿಯ ಬದಿ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ರಸ್ತೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ಕಾಮತ್, ಕೇಂದ್ರೀಯ ಆದಾಯ ತೆರಿಗೆ ಕಚೇರಿಯ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿಯ ಭರವಸೆ ನೀಡಿದ್ದೆ.ಸದ್ಯ ಕಾಮಗಾರಿ ಪೂರ್ಣಗೊಂಡಿರುವುದರಿಂದ ಕಚೇರಿಗೆ ಆಗಮಿಸುವವರಿಗೆ ಅನುಕೂಲವಾಗಲಿದೆ ಎಂದರು.
ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಕಚೇರಿಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅದ್ಯಕ್ಷರಾದ ಜಗದೀಶ್ ಶೆಟ್ಟಿ ಬೋಳೂರು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅದ್ಯಕ್ಷರಾದ ಪೂರ್ಣಿಮಾ, ಸ್ಥಳೀಯ ಮುಖಂಡರಾದ ರಂಗನಾಥ್ ಕಿಣಿ, ಅನಿಲ್ ಅತ್ತಾವರ, ರಾಮರಾಯ್ ಕಾಮತ್, ರಾಘವ್ ಬಂಗೇರ, ರತ್ನ ಆನಂದ್, ವಂದನಾ, ಅಶ್ವಿನ್ ರಾವ್, ಶ್ಯಾಮ್ ಲಾಲ್ ಎರ್ಮಾಳ್, ದಯಾನಂದ ಸಂನ್ಯಾಸಿಗುಡ್ಡೆ, ಆಶಾ ಬೋಪಣ್ಣ, ಲಕ್ಷ್ಮಣ್ ಭಟ್, ನೆಲ್ಸಲ್ ಕ್ಯಾಸ್ಟಲಿಯೋನೋ ಆದಾಯ ತೆರಿಗೆ ಕಚೇರಿಯ ಅಧಿಕಾರಿಗಳು ಹಾಗೂಸಾರ್ವಜನಿಕರು ಉಪಸ್ಥಿತರಿದ್ದರು.
<iframe width=”560″ height=”315″ src=”https://www.youtube.com/embed/XVKFZKOfrN4″ frameborder=”0″ allow=”accelerometer; autoplay; clipboard-write; encrypted-media; gyroscope; picture-in-picture” allowfullscreen></iframe>
Click this button or press Ctrl+G to toggle between Kannada and English