ಮೈಸೂರು: ಮೈಸೂರು ಅರಮನೆಯಲ್ಲಿ ಈ ಬಾರಿ ದಸರಾ ಸರಳವಾಗಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಇದುವರೆಗೆ ಕಾಣುತ್ತಿದ್ದ ಸಂಭ್ರಮವೂ ಇಲ್ಲದಾಗಿದೆ. ಆದರೆ ದಸರಾ ನಡೆಯುತ್ತಿದೆ ಎಂಬುದನ್ನು ನಗರಕ್ಕೆ ಮಾಡಿರುವ ದೀಪಾಲಂಕಾರಗಳು ಮಾತ್ರ ಹೇಳುತ್ತಿವೆ.
ಮೈಸೂರಿಗೂ ದೀಪಾಲಂಕಾರಕ್ಕೂ ಬಿಡಿಸಲಾರದ ನಂಟಿದೆ. ಮೈಸೂರಿಗೆ ವಿದ್ಯುದ್ದೀಪಗಳು ಬರುವ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸ್ಥಳಗಳಲ್ಲಿ ಹರಳೆಣ್ಣೆ ಮತ್ತು ಸೀಮೆ ಎಣ್ಣೆಯ ಬುಡ್ಡಿದೀಪಗಳನ್ನು ಹಚ್ಚಲಾಗುತ್ತಿತ್ತು. ಬೀದಿಯಲ್ಲಿರುವ ಮರ ಅಥವಾ ಕಲ್ಲಿನ ಕಂಬಗಳಲ್ಲಿ ಇಡಲಾಗುತಿದ್ದ ದೀಪಕ್ಕೆ ಅದರ ಉಸ್ತುವಾರಿಗೆ ನೇಮಿಸಿದ್ದ ನೌಕರ ಪ್ರತಿದಿನವೂ ರಾತ್ರಿಯಾಗುತ್ತಿದ್ದಂತೆಯೇ ಏಣಿಯೊಂದಿಗೆ ಬಂದು ಎತ್ತರದಲ್ಲಿಟ್ಟಿದ್ದ ಕಂಬ, ಮರಕ್ಕೆ ಏಣಿಯ ಸಹಾಯದಿಂದ ಹತ್ತಿ ದೀಪಕ್ಕೆ ಎಣ್ಣೆ ಹಾಕಿ ಬಳಿಕ ದೀಪವನ್ನು ಹಚ್ಚಿ ಹೋಗುತ್ತಿದ್ದನು.
ವರ್ಷದಿಂದ ವರ್ಷಕ್ಕೆ ವಿಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆಯೇ ಪೆಟ್ರೋಮ್ಯಾಕ್ಸ್ ದೀಪಗಳು ಬಳಕೆಗೆ ಬಂದಿದ್ದರಿಂದ ಅವುಗಳನ್ನು ಅಳವಡಿಸಿಕೊಳ್ಳಲಾಯಿತು.
1908 ರಲ್ಲಿ ವಿದ್ಯುತ್ ದೀಪಗಳು ಮೈಸೂರಿಗೆ ಬಂದವು. ಅವತ್ತಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಜನಗನ್ಮೋಹನ ಅರಮನೆಯ ಸಿಂಹಾಸನವನ್ನು ಅಲಂಕರಿಸಿ 1908ರ ಸೆಪ್ಟಂಬರ್ 26 ರಂದು ವಿದ್ಯುತ್ ದೀಪದ ಸ್ವಿಚ್ಚನ್ನು ಒತ್ತುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಚಾಮುಂಡಿಬೆಟ್ಟಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಮುಂದೆ ಬೀದಿಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಯಿತಲ್ಲದೆ, ಮೂಂದೆ ಅಂಬಾ ವಿಲಾಸ ಅರಮನೆ ನಿರ್ಮಿಸಿದ ಬಳಿಕ ಅದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು.
ಪ್ರತಿವರ್ಷವೂ ದಸರಾದ ವೇಳೆ ಅರಮನೆ ಸೇರಿದಂತೆ ಸುತ್ತಮುತ್ತ ಸಿದ್ಧತಾ ಕಾರ್ಯಗಳನ್ನು ಮಾಡಲಾಗುತ್ತಿದೆ. ದಸರಾ ದಿನಗಳಲ್ಲಿ ಅರಮನೆ ವಿದ್ಯುತ್ ದೀಪಗಳಿಂದ ಕಂಗೊಳಿಸಲು ಅನುಕೂಲವಾಗುವಂತೆ ದೀಪಗಳ ಜೋಡಣೆಯೂ ನಡೆಯುತ್ತಿದೆ. ಅರಮನೆಯಲ್ಲಿ ಕೆಟ್ಟಿರುವ ಬಲ್ಬ್‌ಗಳನ್ನು ಬದಲಾಯಿಸುವ ಕಾರ್ಯವೂ ನಡೆಯುತ್ತದೆ.
ಅರಮನೆ ದೀಪಾಲಂಕಾರದ ಬಗೆಗಿನ ಇತಿಹಾಸವನ್ನು ನೋಡಿದರೆ ೧೯೪೨ರ ಆಸುಪಾಸಿನಲ್ಲಿ ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿದರು ಎಂದು ಹೇಳಲಾಗಿದೆ.
ಇದೀಗ ದಸರಾ ಹಿನ್ನಲೆಯಲ್ಲಿ ನಗರಕ್ಕೆ ಮಾಡಿರುವ ದೀಪಾಲಂಕಾರ ರಾತ್ರಿಯಾಗುತ್ತಿದ್ದಂತೆಯೇ ಝಗಮಗಿಸುತ್ತಾ ಸ್ವರ್ಗ ಲೋಕವೇ ಧರೆಗಿಳಿದಂತೆ ಭಾಸವಾಗುತ್ತದೆ. ನಗರದ ಪ್ರಮುಖ ವೃತ್ತಗಳಾದ ರಾಮಸ್ವಾಮಿ, ಚಾಮರಾಜ, ಕೃಷ್ಣರಾಜ, ಜೆಎಸ್‌ಎಸ್ ವಿದ್ಯಾಪೀಠದ ಬಳಿಯ ಬಸವೇಶ್ವರ ವೃತ್ತ, ಪಾಲಿಕೆ ಕಚೇರಿ, ಅಗ್ರಹಾರ, ಸಿದ್ದಪ್ಪ ವೃತ್ತ, ಆಯುರ್ವೇದ ಆಸ್ಪತ್ರೆ, ಆರ್‌ಟಿಓ ಹೀಗೆ ನಗರದ ಸುಮಾರು ನಲುವತ್ತಕ್ಕೂ ಹೆಚ್ಚಿನ ವೃತ್ತಗಳಿಗೆ ಹಾಗೂ ಪ್ರಮುಖ ರಸ್ತೆಗಳಾದ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಮೈಸೂರು ಬೆಂಗಳೂರು ರಸ್ತೆ, ಚಾಮರಾಜ ಜೋಡಿ ರಸ್ತೆ, ಎಂ.ಜಿ.ರಸ್ತೆ, ಜೆಎಲ್‌ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಿಗೆ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗಿದೆ.
ರಾಮಸ್ವಾಮಿ ವೃತ್ತದಲ್ಲಿ ವಿದ್ಯುದ್ದೀಪಗಳಿಂದ ಅಂಬಾವಿಲಾಸ ಅರಮನೆ ಪ್ರತಿಕೃತಿಯನ್ನು ಸೃಷ್ಠಿಸಲಾಗಿದ್ದರೆ, ಹಾರ್ಡಿಂಜ್ ವೃತ್ತದ ಬಳಿ ಐಫೆಲ್ ಟವರ್ ಹಾಗೂ ವಿವಿಧೆಡೆ ಕೊರೋನಾ ಜಾಗೃತಿ ಸೃಷ್ಠಿಸುವ ವಿವಿಧ ಚಿತ್ರಗಳನ್ನು ವಿದ್ಯುದ್ದೀಪದಲ್ಲಿಯೇ ಸೃಷ್ಠಿ ಮಾಡಲಾಗಿದೆ. ಮರಗಳು, ಕಟ್ಟಡಗಳು ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿರುವುದರಿಂದ ಪ್ರತಿದಿನವೂ ರಾತ್ರಿಯಾಗುತ್ತಿದ್ದಂತೆಯೇ ಸ್ವರ್ಗ ಲೋಕವೇ ಧರೆಗಿಳಿದಂತೆ ಭಾಸವಾಗುತ್ತಿದೆ.
Click this button or press Ctrl+G to toggle between Kannada and English