ರೊಜಾರಿಯೋ ಕೆಥೆಡ್ರಲ್‌ನಲ್ಲಿ ಕ್ರಿಸ್ಮಸ್ ಸಾಮೂಹಿಕ ಪ್ರಾರ್ಥನೆ

5:05 PM, Friday, December 25th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bhisop ಮಂಗಳೂರು : ರೊಜಾರಿಯೋ ಕೆಥೆಡ್ರಲ್‌ನಲ್ಲಿ ಗುರುವಾರ ರಾತ್ರಿ ಬಿಷಪ್ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಹಬ್ಬದ ಬಲಿಪೂಜೆ ನಡೆಯಿತು. ಕೆಥೆಡ್ರಲ್‌ನ ರೆಕ್ಟರ್ ವಂ. ಆಲ್ಪ್ರೆಡ್ ಜೆ.ಪಿಂಟೋ, ಸಹಾಯಕ ಗುರು ವಂ. ವಿನೋದ್ ಲೋಬೋ, ರೊಸಾರಿಯೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ವಿಕ್ಟರ್ ಡಿಸೋಜ ಭಾಗವಹಿಸಿದ್ದರು.

ಕೊರೋನ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲೆಡೆ ಸರಳವಾಗಿ ಹಬ್ಬದ ಆಚರಣೆ ಆಯೋಜಿಸಲಾಗಿದೆ. ಈ ಬಾರಿ ಸಾಂತಾಕ್ಲಾಸ್ ಸಂಭ್ರಮವೂ ಇರುವುದಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಸರಳ ಮಾದರಿಯಲ್ಲಿ ಶುಭಾಶಯ ಸಲ್ಲಿಸುವ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ. ಶುಕ್ರವಾರ ಕ್ರಿಸ್ಮಸ್ ಹಬ್ಬದ ಆಚರಣೆ ನಡೆಯಲಿದೆ.

ಚರ್ಚ್‌ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯಲಿದೆ. ಮನೆಗಳಲ್ಲಿ ಕ್ರಿಸ್ಮಸ್ ವಿಶೇಷ ತಿಂಡಿ ತಿನಿಸು ‘ಕುಸ್ವಾರ್’ ವಿನಿಮಯ ಮತ್ತು ಹಬ್ಬದ ಭೋಜನದೊಂದಿಗೆ ಹಬ್ಬದ ಸಂಭ್ರಮ ನೆರವೇರಲಿದೆ. ಮಂಗಳೂರು ಧರ್ಮಪ್ರಾಂತದ ಬಿಷಪ್ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಚಿಂದಿ ಬಟ್ಟೆಯಲ್ಲಿ ಸುತ್ತಿದ್ದ ಹಾಗೂ ಗೋದಲಿಯಲ್ಲಿ ಮಲಗಿದ್ದ ಬಾಲಯೇಸು ಆಹಾರವಿಲ್ಲದ ಹಸಿದ ಹೊಟ್ಟೆಯಲ್ಲಿ ನಿದ್ದೆಗೆ ಜಾರುವ ಬಡವರ ಕಷ್ಟಗಳನ್ನು ಅನುಭವಿಸಿದವರು. ವಸತಿ ಇಲ್ಲದೆ ಬೀದಿ ಬದಿಗಳಲ್ಲಿ ಮಲಗುವ ನಿರಾಶ್ರಿತರ ಆತಂಕಗಳನ್ನು ಅರಿತವರು.

ಉದ್ಯೋಗ ಕಳೆದುಕೊಂಡು ತಮ್ಮ ಕುಟುಂಬಗಳನ್ನು ಸಾಕಲು ಕಷ್ಟಪಡುತ್ತಿರುವ ನಿರುದ್ಯೋಗಿಗಳ ಬವಣೆ ಅರಿತವರು. ಕೊರೋನ ಮತ್ತು ಇತರ ರೋಗಗಳಿಂದ ಸೋಂಕಿತರಾಗಿ ಔಷಧಕ್ಕಾಗಿ ಹಣ ಇಲ್ಲದವರ ಪಾಡನ್ನು ತಿಳಿದವರು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲು ಕಷ್ಟಪಡುತ್ತಿರುವ ಹೆತ್ತವರ ದುಃಖವನ್ನು ಅರಿತವರಾಗಿದ್ದು, ಇಂತಹ ಸಮಾಜದಲ್ಲಿರುವ ಅಶಕ್ತರೊಡನೆ ನಾವು ಬೆರೆತು ಕ್ರಿಸ್ಮಸ್ ಆಚರಿಸೋಣ ಎಂದು ಅವರು ಹೇಳಿದರು.

ಏಸು ಕ್ರಿಸ್ತರ ಜನ್ಮದಿನದ ಮುನ್ನಾ ದಿನವಾದ ಗುರುವಾರ ಕ್ರೈಸ್ತರು ಕ್ರಿಸ್ಮಸ್ ಜಾಗರಣೆಯ ರಾತ್ರಿಯನ್ನು ಆಚರಿಸಿದರು. ಶುಕ್ರವಾರ ಬೆಳಗ್ಗೆ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಹಬ್ಬದ ಬಲಿ ಪೂಜೆಗಳು ನೆರವೇರಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English