ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಆತಂಕಕಾರಿ ಮಟ್ಟದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗುವ ಸೂಚನೆ ಇದೆ. ನಗರದಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಇನ್ನೂ ಹೆಚ್ಚಿನ ಬಿಗಿಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯಗಳು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ತುರ್ತು ಸಭೆ ನಡೆಸಿ ಚರ್ಚಿಸಿದ್ದಾರೆ. ಆದರೆ, ಏಪ್ರಿಲ್ 20, ಮಂಗಳವಾರದವರೆಗೂ ಈಗಿರುವ ಕ್ರಮಗಳನ್ನ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.
ಜನತಾ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮೊದಲಾದ ಕ್ರಮಗಳ ಬಗ್ಗೆ ಭಾನುವಾರ ನೋಡೋಣ. ಸಚಿವರು, ಸರ್ವಪಕ್ಷಗಳ ಸದಸ್ಯರ ಜೊತೆ ಚರ್ಚಿಸಿ ನಿರ್ಧರಿಸೋಣ ಎಂದು ಸಭೆಯಲ್ಲಿ ಹೇಳಿದ ಮುಖ್ಯಮಂತ್ರಿಗಳು, ಈಗ ಎದ್ದಿರುವ ಸಮಸ್ಯೆಗಳನ್ನ ತತ್ಕ್ಷಣವೇ ಪರಿಹರಿಸುವುದಕ್ಕೆ ಹೆಚ್ಚು ಗಮನ ಕೊಡೋಣ ಎಂದು ಹೇಳಿದರು.
ಚಿಕಿತ್ಸೆಯಲ್ಲಿ ಆಗುತ್ತಿರುವ ಲೋಪಗಳನ್ನ ಮೊದಲು ಸರಿಪಡಿಸಿ. ಅಂತ್ಯಕ್ರಿಯೆ ಹೆಸರಲ್ಲಿ ನಡೆಯುತ್ತಿರುವ ಸುಲಿಗೆಯನ್ನ ತಡೆಯಿರಿ. ಕೋವಿಡ್ ರೋಗಿಗಳಿಗೆ ಬೆಡ್ ವ್ಯವಸ್ಥೆ ಸರಿಯಾಗಿ ಮಾಡಿ. ರೆಮ್ಡಿಸೀವರ್ ಔಷಧ ಸಮರ್ಪಕವಾಗಿ ಸಿಗುವಂತೆ ಮಾಡಿ ಎಂದು ಸಭೆಯಲ್ಲಿ ಸಚಿವರು ಮತ್ತು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.
ಬೆಂಗಳೂರಿನಲ್ಲಿ ಮಿತಿಮೀರುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ತಜ್ಞರು ಕೊಟ್ಟಿರುವ ವರದಿಯ ಅಂಶಗಳನ್ನ ಸಭೆಯಲ್ಲಿ ಚರ್ಚಿಸಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಈ ಎಲ್ಲಾ ಮಾಹಿತಿ ಪಡೆದುಕೊಂಡರು. ಏಪ್ರಿಲ್ 20ರವರೆಗೂ ಯಾವುದೇ ಬದಲಾವಣೆ ಮಾಡುವುದು ಬೇಡ. 20ರ ನಂತರ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳೋಣ. ಈಗಿರುವ ನೈಟ್ ಕರ್ಫ್ಯೂವನ್ನು ಎಷ್ಟು ದಿನ ಮುಂದುವರಿಸಬೇಕು? ಯಾವ್ಯಾವ ಜಿಲ್ಲೆಗಳಿಗೆ ಕರ್ಫ್ಯೂ ವಿಸ್ತರಿಸಬೇಕು? ವಾರಾಂತ್ಯ ದಿನಗಳ ಲಾಕ್ ಡೌನ್ ಮಾಡಬೇಕಾ? ಜನತಾ ಕರ್ಫ್ಯೂ ಹೇರಬೇಕಾ ಇತ್ಯಾದಿ ವಿಚಾರಗಳನ್ನ 20ರಂದು ಚರ್ಚಿಸಿ ಒಂದು ನಿರ್ಧಾರಕ್ಕೆ ಬರೋಣ ಎಂದು ಮುಖ್ಯಮಂತ್ರಿಗಳು ತಿಳಿಸಿದರೆನ್ನಲಾಗಿದೆ.
ನಾಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ಜೊತೆ ಪ್ರತ್ಯೇಕವಾಗಿ ಸಿಎಂ ಚರ್ಚಿಸಲಿದ್ಧಾರೆ. ನಾಳಿದ್ದು, ಅಂದರೆ ಏಪ್ರಿಲ್ 18ರಂದು ಸರ್ವಪಕ್ಷ ಸಭೆ ನಡೆಯಲಿದೆ. ಅದಾದ ಬಳಿಕ ಕಠಿಣ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
Click this button or press Ctrl+G to toggle between Kannada and English