ಮಂಗಳೂರು : ಮಂಗಳೂರು ಸಿಸಿಬಿ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಅಪಹರಿಸಿ ಚಿನ್ನ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ.
ಜೋಕಟ್ಟೆ ತೋಕೂರು ನಿವಾಸಿಗಳಾದ ಅಬ್ದುಲ್ ಸಲಾಂ ಯಾನೆ ಪಟೌಡಿ ಸಲಾಂ (34), ಮುಹಮ್ಮದ್ ಶಾರೂಕ್ (26), ಬೆಂಗಳೂರು ಜೆಎಚ್‌ಬಿಸಿಎಸ್ ಲೇಔಟ್‌ನ ಸಯ್ಯದ್ ಹೈದರಲಿ (29), ಬೆಂಗಳೂರು ಜೆಪಿ ನಗರದ ಆಸಿಫ್ ಅಲಿ (28), ಮುಂಬೈನವರಾದ ಶೇಖ್ ಸಾಜಿದ್ ಹುಸೇನ್ (49), ಅಬ್ದುಲ್ಲಾ ಶೇಖ್ (22), ಶಾಬಾಸ್ ಹುಸೇನ್ (49), ಥಾಣೆಯ ಮುಶಾಹಿದ್ ಅನ್ಸಾರಿ (38), ಮುಸ್ತಾಕ್ ಖುರೇಷಿ (42), ಮುಹಮ್ಮದ್ ಮಹಝ್(20) ಮತ್ತು ಮುಹಮ್ಮದ್ ಆದಿಲ್(25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಲ್ಲಿ ಮಾಜಿ ಶಾಸಕರೊಬ್ಬರ ಮಾಜಿ ಕಾರು ಚಾಲಕನೂ ಸೇರಿದ್ದಾನೆ.
ಆರೋಪಿಗಳಿಂದ ಎರಡು ಕಾರು, ಐದು ತಲವಾರುಗಳು, 10 ಮೊಬೈಲ್ ಫೋನ್ ಗಳು ಹಾಗೂ ದರೋಡೆ ಮಾಡಲಾದ 440 ಗ್ರಾಂ ಚಿನ್ನದಲ್ಲಿ 300 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತರು, ಆರೋಪಿಗಳ ಪೈಕಿ ಅಬ್ದುಲ್ ಸಲಾಂ ವಿರುದ್ಧ ಪಣಂಬೂರು ಠಾಣೆಯಲ್ಲಿ ಹಲ್ಲೆ, ಜೀವ ಬೆದರಿಕೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ, ದರೋಡೆ ಪ್ರಕರಣ, ಬಜ್ಪೆ ಠಾಣೆಯಲ್ಲಿ ಹಲ್ಲೆ, ಬರ್ಕೆ ಠಾಣೆಯಲ್ಲಿ ಜೈಲಿನಲ್ಲಿದ್ದ ಸಮಯ ಹೊಡೆದಾಟ, ಮೂಡುಬಿದಿರೆ ಠಾಣೆಯಲ್ಲಿ ಕೊಲೆ ಯತ್ನ ಸೇರಿ 10 ಪ್ರಕರಣಗಳು ದಾಖಲಾಗಿದ್ದು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಮುಂಬೈಯ ರಹ್ಮಾನ್ ಶೇಖ್ ಎಂಬವರು ಅವರ ಸಂಬಧಿಕರಾದ ಬೆಂಗಳೂರಿನ ಹೈದರಲಿ ಎಂಬವರಿಗೆ ನೀಡುವಂತೆ ಹೇಳಿ ಮೂಡುಬಿದಿರೆ ನಿವಾಸಿ ವಕಾರ್ ಯೂನುಸ್ ಎಂಬವರ ಮೂಲಕ 440 ಗ್ರಾಂ ಚಿನ್ನದ ಪಾರ್ಸೆಲ್ ಮೇ ತಿಂಗಳ ಮೊದಲ ವಾರದಲ್ಲಿ ಕಳುಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಕಾರ್ ಯೂನುಸ್ ರನ್ನು ಕಾರಿನಲ್ಲಿ ಅಪಹರಿಸಿ ಕಾಸರಗೋಡು ಜಿಲ್ಲೆಯ ಉಪ್ಪಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಯೂನುಸ್ ರಿಂದ ಚಿನ್ನವನ್ನು ದರೋಡೆ ಮಾಡಿದ್ದಾರೆ.
ಅಪಹರಣ ಹಾಗೂ ದರೋಡೆ ಕೃತ್ಯಕ್ಕೆ ಬಳಸಲಾದ ಇನ್ನೋವಾ ಕಾರು ಧರ್ಮಗುರುವೊಬ್ಬರ ಪುತ್ರನ ಹೆಸರಿನಲ್ಲಿದ್ದು, ಅವರ ಯಾವುದೇ ಪಾತ್ರ ಈ ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.
ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಎಸಿಪಿ ನಟರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English