ಮಂಗಳೂರು : ನಗರದ ಹೃದಯಭಾಗದಲ್ಲಿ ಮಿನಿ ವಿಧಾನಸೌಧ ಕಟ್ಟಡದ ಬಳಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸ೦ಘದ ಸ್ವಾಧೀನ ಮತ್ತು ಒಡೆತನಕ್ಕೊಳಪಟ್ಟ ಮ೦ಗಳೂರು ತಾಲೂಕು ಅತ್ತಾವರ ಗ್ರಾಮದ ಸರ್ವೆ ನಂ.278/2B ಗೆ ಒಳಪಟ್ಟ 33 ಸೆಂಟ್ಸ್ ಸ್ಥಳದ ಪಹಣಿಯನ್ನು ರದ್ದುಪಡಿಸಿ ಸರಕಾರದ ಹೆಸರಿಗೆ ನಿಹಿತ ಪಡಿಸುವಂತೆ ಹಾಗೂ ಸದರಿ ಸ್ಥಿರಾಸ್ಥಿಯಲ್ಲಿರುವ ಕಟ್ಟಡವನ್ನು ಜಿಲ್ಲಾ ಸಂಘದ ಸ್ವಾಧೀನತೆಯಿಂದ ಬಿಡಿಸಿ ಸರಕಾರದ ವಶಕ್ಕೆ ಪಡೆದು ಅಕ್ರಮ ಎಸಗಿದ ಸಂಬಂಧಪಟ್ಟ ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಭೂ ಕಂದಾಯ ಕಾಯ್ದೆ 192 ಎ ಪ್ರಕಾರ ಕ್ರಮ ಕೈಗೊಳ್ಳಲು ಮ೦ಗಳೂರಿನ ತಹಸೀಲ್ದಾರ್ ರವರಿಗೆ ಮಂಗಳೂರಿನ ಸಹಾಯಕ ಆಯುಕ್ತರು ಮತ್ತು ಉಪವಿಭಾಗ ದಂಡಾಧಿಕಾರಿಗಳ ನ್ಯಾಯಾಲಯ ದಿನಾ೦ಕ 30.11.2021 ರ೦ದು ಆದೇಶ ನೀಡಿತ್ತು.
ಕಳೆದ ಆರು ದಶಕಗಳಿಂದ ತನ್ನ ಸ್ವಾಧೀನದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಟ್ಟಡ ಸಹಿತ ಸ್ಥಿರಾಸ್ತಿಯನ್ನು ರಕ್ಷಿಸಿಕೊಳ್ಳಲು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಎ.ಸಿ. ಕೋರ್ಟಿನ ಆದೇಶ ರದ್ದುಪಡಿಸುವಂತೆ ಜಿಲ್ಲಾ ಸಂಘವು ದಾವೆ ಹೂಡಿತ್ತು. ಸದರಿ ದಾವೆಯಲ್ಲಿ ಸಲ್ಲಿಸಲಾದ ಮಧ್ಯಂತರ ಅರ್ಜಿಯ ಮೇಲೆ ಆದೇಶ ಹೊರಡಿಸಿದ ನ್ಯಾಯಾಲಯವು ದಾವೆಯ ಮುಂದಿನ ವಾಯಿದೆ ವರೆಗೆ ಎ.ಸಿ. ಕೋರ್ಟಿನ ಆದೇಶಕ್ಕೆ ದಿನಾ೦ಕ 5.1.2022 ರ೦ದು ತಡೆಯಾಜ್ಞೆ ನೀಡಿತ್ತು.
ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಸಹಾಯಕ ಆಯುಕ್ತರ ನ್ಯಾಯಾಲಯದ ಆದೇಶದ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲು ಅವಕಾಶವಿಲ್ಲ ಎಂಬ ಸರಕಾರಿ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಮಂಗಳೂರಿನ ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಸಂಘವು ಹೂಡಿದ ದಾವೆಯನ್ನು ತಿರಸ್ಕರಿಸಿ ದಿನಾಂಕ 14.2.2022 ರಂದು ಆದೇಶ ಹೊರಡಿಸಿದೆ.
Click this button or press Ctrl+G to toggle between Kannada and English