ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

8:55 PM, Thursday, September 21st, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಯಾವುದೇ ಸಂಶೋಧನೆಯ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬೇಕಾದರೆ ಆ ಸಂಶೋಧನಾ ಕಾರ್ಯದ ಹಿಂದೆ‌ ನಮ್ಮ ತಾಳ್ಮೆ, ಉತ್ಸಾಹ, ಕಠಿಣ ಪರಿಶ್ರಮ ಪ್ರಮುಖ ಪಾತ್ರವಹಿಸುತ್ತದೆ. ವಿಜ್ಞಾನ ಹಾಗೂ ಇಂದಿನ‌ ಆಧುನಿಕ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ‌ ಯುವ ಸಮುದಾಯ ಹೆಚ್ಷೆಚ್ಷು ತೊಡಗಿಸಿಕೊಂಡು ಹೊಸ ಹೊಸ ಆವಿಷ್ಕಾರದೊಂದಿಗೆ ಸಮಾಜಕ್ಕೆ‌ ತಮ್ಮದೇ ಆದ ಕೊಡುಗೆ‌ ನೀಡಬೇಕಿದೆ, ಎಂದು ಐಐಟಿಎಂ ಚೆನ್ನೈ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಎ.ಎಸ್.ರಾಮಚಂದ್ರರಾವ್ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆಯಲಿರುವ ‘ಭೌತಶಾಸ್ತ್ರ ಮತ್ತು ನ್ಯಾನೋತಂತ್ರಜ್ಞಾನ’ ಎಂಬ ವಿಷಯದಲ್ಲಿ ಮೂರು ದಿನ‌ಗಳ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು. ಮುಂದಿನ ಮೂವತ್ತು ವರ್ಷಗಳು ನ್ಯಾನೋ ತಂತ್ರಜ್ಞಾನ ಕ್ಷೇತ್ರಗಳ ಮೂಲಕ ಅಮೂಲಾಗ್ರ ಬದಲಾವಣೆಯಾಗಲಿದೆ ಹಾಗೂ ಅನೇಕ ಅವಕಾಶಗಳ ವಿಸ್ತರಣೆಯಾಗಲಿದೆ, ಎಂದರು.

ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರವು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಭೌತಶಾಸ್ತ್ರ ಮತ್ತು ನ್ಯಾನೋ ಟೆಕ್ನಾಲಜಿ ಎಂಬ ಮಹತ್ವದ ವಿಷಯದಲ್ಲಿ ಮಂಗಳೂರು‌ ವಿವಿಯ ಭೌತಶಾಸ್ತ್ರ ವಿಭಾಗವು ಮೂರು ದಿನಗಳ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಿದ್ದು, ಅನೇಕ ಹೊಸ ಆವಿಷ್ಕಾರ ಮತ್ತು ಬೆಳವಣಿಗೆಗೆ ಈ ಸಮ್ಮೇಳನ ಸಾಕ್ಷಿಯಾಗಲಿ, ಎಂದರು.

ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಂ.ವಿ.ಎನ್.ಅಂಬಿಕಾ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಗಳೂರು ವಿವಿ ಭೌತಶಾಸ್ತ್ರ ವಿಭಾಗದ ಅಧ್ಯಕ್ಷರು ಹಾಗೂ ವಿವಿ ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕರಾದ‌ ಪ್ರೊ.ದೇವೆಂದ್ರಪ್ಪ ವಂದಿಸಿದರು. ರಕ್ಷಾ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನದಲ್ಲಿ ವಿವಿಧ ಸಂಸ್ಥೆಗಳ ಸುಮಾರು 250 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ವಿವಿಧ ದೇಶಗಳ ಒಟ್ಟು‌ 14 ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಷಯ ತಜ್ಞರು ಭೌತಶಾಸ್ತ್ರ ಹಾಗೂ ನ್ಯಾನೋ ತಂತ್ರಜ್ಞಾನದ ಕ್ಷೇತ್ರದ ವಿಷಯಗಳ‌ ಕುರಿತು ಉಪನ್ಯಾಸ ನೀಡಲಿದ್ದಾರೆ. ಗುರುವಾರದಂದು ವಿವಿಧ ಸಂಪನ್ಮೂಲ ವ್ಯಕ್ತಿಗಳ ವಿಶೇಷ ಉಪನ್ಯಾಸಗಳ ಬಳಿಕ ಯಕ್ಷಗಾನ, ಭರತನಾಟ್ಯ ಹಾಗೂ ಇತರ ನೃತ್ಯಪ್ರಕಾರಗಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English