ಬಂಟ್ವಾಳ : ಸೆ. 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸರಕಾರಿ ಶಾಲೆ ಉಳಿಸಿ ಅಭಿಯಾನದ ಕಾಲ್ನಡಿಗೆ ಜಾಥಕ್ಕೆ ಪೂರ್ವಭಾವಿಯಾಗಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ರಾಜ್ಯದ್ಯಂತ ಸಂಚರಿಸಲಿರುವ ರಥಯಾತ್ರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಬಂಟ್ವಾಳ ಬಡ್ಡಕಟ್ಟೆಯ ಹನುಮಾನ್ ದೇವಸ್ಥಾನದ ಬಳಿ ಬುಧವಾರ ಚಾಲನೆ ನೀಡಿದರು.
ಕರೆಂಕಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರಂಭಗೊಂಡ ರಥಯಾತ್ರೆಗೆ ಬಡ್ಡಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಸಾಥ್ ನೀಡಿ ಬಂಟ್ವಾಳ ಪೇಟೆ ಮೂಲಕ ಬೈಪಾಸ್ ವರೆಗೆ ಕಾಲ್ನಡಿಗೆ ಮೂಲಕ ಆಗಮಿಸಿ ಬೀಳ್ಕೊಟ್ಟರು.
ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಅವರು ಮಾತನಾಡಿ, ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ದಡ್ಡಲಕಾಡು ಸರಕಾರಿ ಶಾಲೆಯನ್ನು ರಾಜ್ಯದಲ್ಲೇ ಮಾದರಿ ಶಾಲೆಯನ್ನಾಗಿ ರೂಪಿಸಿದೆ. ಇಂತಹ ಮಾದರಿ ಶಾಲೆ ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ನಿರ್ಮಾಣವಾಗಬೇಕು. ಈ ಬಗ್ಗೆ ವಿಧಾನಸೌಧದಲ್ಲೂ ಧ್ವನಿ ಎತ್ತುವುದಾಗಿ ಅವರು ತಿಳಿಸಿದರು.
ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಹರಿಕೃಷ್ಣ ಬಂಟ್ವಾಳ್, ಜಿ.ಆನಂದ, ದಿನೇಶ್ ಭಂಡಾರಿ, ದೇವದಾಸ ಶೆಟ್ಟಿ, ಸೀತರಾಮ ಪೂಜಾರಿ, ನಾಗೇಶ್ ಸಾಲ್ಯಾನ್, ಪದ್ಮನಾಭ ಪೂಜಾರಿ ಕೇಲ್ದೋಡಿ, ಆನಂದ ಕೋಟ್ಯಾನ್, ಲಕ್ಷ್ಮೀನಾರಾಯಣ ಗೌಡ, ದಿನೇಶ್ ರಾಯಿ, ರಮನಾಥ ಪೈ, ಮೀನಕ್ಷಿ ಗೌಡ, ಸೀತರಾಮ ಕೆ. ರಾಮಚಂದ್ರ ಪೂಜಾರಿ, ಪೂವಪ್ಪ ಮೆಂಡನ್, ಧರ್ಣಪ್ಪ ಪೂಜಾರಿ, ಪುರುಷೋತ್ತಮ ಅಂಚನ್, ಶೇಖರ್ ಅಂಚನ್ ಮತ್ತಿತರರು ಹಾಜರಿದ್ದರು.
ಬಳಿಕ ರಾಯಿ, ಸಿದ್ದಕಟ್ಟೆಯ ಮೂಲಕ ರಥಯಾತ್ರೆ ಮೂಡಬಿದಿರೆಯತ್ತ ಸಾಗಿತು.
Click this button or press Ctrl+G to toggle between Kannada and English