ಲಂಡನ್ : ವಿವಿಧ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ ಸಾಲದ ಬಾಕಿ ಉಳಿಸಿಕೊಂಡು ಬ್ರಿಟನ್ ದೇಶಕ್ಕೆ ಹೋಗಿ ನೆಲಸಿರುವ ವಿಜಯ್ ಮಲ್ಯ ಈಗ ಬ್ಯಾಂಕುಗಳಿಗೆ ಹಣ ವಾಪಸ್ ಕೊಡುವುದಾಗಿ ಮತ್ತೊಮ್ಮೆ ಹೇಳಿದ್ಧಾರೆ. ವಿಜಯ್ ಮಲ್ಯ ಈ ಹಿಂದೆಯೂ ತಾನು ಬ್ಯಾಂಕುಗಳ ಬಾಕಿ ಹಣ ಹಿಂದಿರುಗಿಸುತ್ತೇನೆ ಎಂದು ಕೆಲ ಬಾರಿ ಹೇಳಿದ್ದುಂಟು. ನಿನ್ನೆ ಅವರು ಬ್ರಿಟನ್ ಉಚ್ಚ ನ್ಯಾಯಾಲಯದ ಬಳಿ ಈ ವಿಚಾರವನ್ನು ಅರಿಕೆ ಮಾಡಿಕೊಂಡಿದ್ದಾರೆ. ಭಾರತಕ್ಕೆ ಹಸ್ತಾಂತರಿಸಬೇಡಿ ಎಂದು ಅವರು ಬ್ರಿಟಿಷ್ ಹೈಕರ್ಟ್ಗೆ ಮನವಿ ಮಾಡಿಕೊಂಡಿದ್ದರು. ಅವರ ಅರ್ಜಿಯ ವಿಚಾರಣೆ 3 ದಿನ ನಡೆಯಿತು. ವಿಚಾರಣೆಯ ಅಂತ್ಯದಲ್ಲಿ ವಿಜಯ್ ಮಲ್ಯ ಭಾರತೀಯ ಬ್ಯಾಂಕುಗಳಿಗೆ ತಾನು ನೀಡಬೇಕಾದ ಅಸಲು ಹಣವನ್ನು ಕೊಟ್ಟುಬಿಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
“ಬ್ಯಾಂಕುಗಳಿಗೆ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ, ದಯವಿಟ್ಟು ಈಗಲೇ ನಿಮ್ಮ ಎಲ್ಲಾ ಅಸಲಿ ಹಣವನ್ನು ತೆಗೆದುಕೊಂಡುಬಿಡಿ” ಎಂದು ನ್ಯಾಯಾಲಯದ ಹೊರಗೆ ಮನವಿ ಮಾಡಿಕೊಂಡಿದ್ದಾರೆ.
ಮದ್ಯದ ದೊರೆ ಹಾಗೂ ಕಿಂಗ್ಫಿಶರ್ ಏರ್ಲೈನ್ಸ್ನ ಮಾಜಿ ಮುಖ್ಯಸ್ಥ ವಿಜಯ್ ಮಲ್ಯ ಭಾರತದ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ಮರುಪಾವತಿ ಮಾಡಿರಲಿಲ್ಲ. ಎಲ್ಲವೂ ಸೇರಿ ಒಟ್ಟು 9,000 ಕೋಟಿಯಷ್ಟು ಹಣ ಬಾಕಿ ಬರುವುದಿತ್ತು ಎಂಬ ಅಂದಾಜಿದೆ. ಬ್ಯಾಂಕುಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮುಂದಾತ್ತಿದ್ದಂತೆಯೇ ವಿಜಯ್ ಮಲ್ಯ ಭಾರತ ಬಿಟ್ಟು ಬ್ರಿಟನ್ಗೆ ಬಂದರು. ಅವರ ವಿರುದ್ಧ ಭಾರತದಲ್ಲಿ ವಿವಿಧ ವಂಚನೆ ಪ್ರಕರಣಗಳು ದಾಖಲಾದವು. ಸಿಬಿಐ ಮತ್ತು ಇಡಿ ಸಂಸ್ಥೆಗಳು ಈ ಪ್ರಕರಣಗಳ ತನಿಖೆ ನಡೆಸುತ್ತಿವೆ. ಮಲ್ಯ ಅವರ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಂಡು ಅದನ್ನು ಹರಾಜು ಹಾಕಲು ಮುಂದಾಗಿವೆ.
ಮಲ್ಯ ಈ ಹಿಂದೆಯೂ ಬ್ಯಾಂಕುಗಳಿಂದ ತಾನು ಪಡೆದಿದ್ದ ಸಾಲದ ಅಸಲು ಹಣವನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಆದರೂ ತನಿಖಾ ಸಂಸ್ಥೆಗಳು ಕಾನೂನು ಪ್ರಕಾರವಾಗಿಯೇ ಮುಂದುವರಿಯಲು ನಿರ್ಧರಿಸಿವೆ.
“ಬ್ಯಾಂಕುಗಳು ನೀಡಿದ ದೂರಿನ ಮೇರೆಗೆ ಜಾರಿ ನಿರ್ದೇಶನಾಲಯವು ನನ್ನ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಂಡಿದೆ. ಹಣ ಅವ್ಯವಹಾರದ ಪಿಎಂಎಲ್ ಕಾಯ್ದೆ ಅಡಿಯಲ್ಲಿ ನಾನು ಯಾವುದೇ ಅಪರಾಧ ಎಸಗಿಲ್ಲ. ಆದರೂ ನನ್ನ ಆಸ್ತಿಯನ್ನು ಇಡಿ ಅಟ್ಯಾಚ್ ಮಾಡಿಕೊಂಡಿದೆ” ಎಂದು ವಿಜಯ್ ಮಲ್ಯ ಬೇಸರ ವ್ಯಕ್ತಪಡಿಸಿದ್ದಾರೆ.
10 ರೂ.ಗೆ ಸಿಗುತ್ತೆ ಅನ್ನ, ಎರಡು ಚಪಾತಿ, ಸ್ವೀಟ್; ಶಿವ ಭೋಜನ ಯೋಜನೆಗೆ ಭಾರೀ ಮೆಚ್ಚುಗೆ“ನಿಮ್ಮ ಹಣ ತೆಗೆದುಕೊಳ್ಳಿ ಎಂದು ನಾನು ಬ್ಯಾಂಕುಗಳಿಗೆ ಹೇಳುತ್ತಿದ್ದೇನೆ. ಆದರೆ, ಜಾರಿ ನಿರ್ದೇಶನಾಲಯದವರು ಇದಕ್ಕೆ ಒಪ್ಪುತ್ತಿಲ್ಲ. ಈ ಆಸ್ತಿಗಳ ಮೇಲೆ ನಮಗೆ ಹಕ್ಕಿದೆ ಎನ್ನುತ್ತಿದ್ದಾರೆ. ಅದೇ ಆಸ್ತಿಗಳ ಮೇಲೆ ಇಡಿ ಮತ್ತು ಬ್ಯಾಂಕುಗಳು ಜಗಳ ಆಡುತ್ತಿವೆ” ಎಂದು ಮಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ವಾಪಸ್ ಹೋಗುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಮಲ್ಯ, “ನನ್ನ ಕುಟುಂಬ ಮತ್ತು ನನ್ನ ಹಿತಾಸಕ್ತಿ ಎಲ್ಲಿರುತ್ತೋ ನಾನು ಅಲ್ಲಿರಬೇಕಾಗುತ್ತದೆ. ಸಿಬಿಐ ಮತ್ತು ಇಡಿ ಪ್ರಾಮಾಣಿಕವಾಗಿದ್ದರೆ ಅದರ ಕಥೆ ಬೇರೆ. ಕಳೆದ ನಾಲ್ಕು ವರ್ಷದಲ್ಲಿ ಇವುಗಳು ನನಗೆ ಮಾಡುತ್ತಿರುವುದು ಪ್ರಾಮಾಣಿಕವಾಗಿಲ್ಲ” ಎಂದು ತಿಳಿಸಿದ್ದಾರೆ.
ಇನ್ನು, ಭಾರತಕ್ಕೆ ಹಸ್ತಾಂತರಗೊಳಿಸಬೇಡಿ ಎಂದು ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಹೈಕೋರ್ಟ್ ಪೀಠವು ಮುಂದಿನ ದಿನಗಳಲ್ಲಿ ತೀರ್ಪು ನೀಡುವುದಾಗಿ ತಿಳಿಸಿದೆ.